ಶಿವರಾಜಕುಮಾರ್ ಅಭಿನಯದ “ಘೋಸ್ಟ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ. “ಘೋಸ್ಟ್’ ಸಿನಿಮಾದ ಮೊದಲ ಹಂತದ ಚಿತ್ರೀಕರವನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಸುಮಾರು 28 ದಿನಗಳ ಕಾಲ ನಡೆಸಲಾಗಿದೆ. ಮೋಹನ್ ಬಿ. ಕೆರೆ ಕಲಾ ನಿರ್ದೇಶನಲ್ಲಿ ಮಿನರ್ವ ಮಿಲ್‌ನಲ್ಲಿ ದುಬಾರಿ ವೆಚ್ಚದಲ್ಲಿ ಸುಮಾರು ಹದಿನೈದಕ್ಕೂ ಅಧಿಕ ವಿಭಿನ್ನ ಸೆಟ್‌ಗಳನ್ನು ನಿರ್ಮಿಸಲಾಗಿದ್ದು, ಈ ಸೆಟ್‌ನಲ್ಲಿ “ಘೋಸ್ಟ್’ ಸಿನಿಮಾದ ಪ್ರಮುಖ ಭಾಗಗಳ ಚಿತ್ರೀಕರಣ ನಡೆಸಲಾಗಿದೆ.
“ಘೋಸ್ಟ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣದಲ್ಲಿ ನಾಯಕ ನಟ ಶಿವರಾಜಕುಮಾರ್ ಅವರೊಂದಿಗೆ ಬಹುಭಾಷಾ ನಟ ಜಯರಾಮ್, ಸತ್ಯ ಪ್ರಕಾಶ್, ಪ್ರಶಾಂತ್ ನಾರಾಯಣನ್ ಮುಂತಾದ ಕಲಾವಿದರು ಭಾಗಿಯಾಗಿದ್ದಾರೆ. ಸದ್ಯ “ಘೋಸ್ಟ್’ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದ್ದು, ಚಿತ್ರೀಕರಣಕ್ಕೆ ಕೆಲದಿನಗಳ ವಿರಾಮ ನೀಡಿದೆ ಚಿತ್ರತಂಡ.
“ಘೋಸ್ಟ್’ ದ್ವಿತೀಯ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಇದೇ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂಬುದು ಚಿತ್ರತಂಡದ ಮಾಹಿತಿ. “ಸಂದೇಶ್ ಪ್ರೋಡಕ್ಷನ್ಸ್’ ಬ್ಯಾನರ್‌ನಲ್ಲಿ ಸಂದೇಶ್ ಎನ್. ನಿರ್ಮಿಸುತ್ತಿರುವ “ಘೋಸ್ಟ್’ ಸಿನಿಮಾಕ್ಕೆ ಶ್ರೀನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಾಸ್ತಿ ಹಾಗೂ ಪ್ರಸನ್ನ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣವಿದೆ.
ರಜನಿಕಾಂತ್ ಚಿತ್ರದಲ್ಲಿ ಶಿವಣ್ಣ
ಇನ್ನು “ಘೋಸ್ಟ್’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ನಟ ಶಿವರಾಜಕುಮಾರ್ ಸದ್ಯ “ಜೈಲರ್’ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ. ರಜನಿಕಾಂತ್ ಅಭಿನಯದ “ಜೈಲರ್’ ಸಿನಿಮಾದಲ್ಲಿ ಶಿವರಾಜಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿಯಾಗುತ್ತಿದ್ದಾರೆ. ಸದ್ಯ ಶಿವರಾಜಕುಮಾರ್ ಅಭಿನಯದ “ವೇದ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಇದೇ ಡಿ. 25ಕ್ಕೆ ಚಿತ್ರ ತೆರೆಗೆ ಬರುತ್ತಿದೆ.