Advertisement

ಶಿವಾಂಕಂ ತೆರೆದ ನೃತ್ಯಾಂತರಂಗ

11:16 AM Sep 01, 2017 | Team Udayavani |

ನೃತ್ಯ ಅನ್ನುವುದು ಸಾಗರವಿದ್ದಂತೆ, ಅತ್ಯಂತ ಆಳ ಹಾಗೂ ವಿಶಾಲವಾದುದು. ಒಬ್ಟಾತನ ಸತತ ಪರಿಶ್ರಮ ಮತ್ತು ಉತ್ಕಟ ಇಚ್ಛೆ ಮಾತ್ರ ಆತನನ್ನು ಕಲಾವಿದನನ್ನಾಗಿಸಲು ಸಾಧ್ಯ. ಹೀಗೆ ಸಾಧನೆಯ ಬೆನ್ನು ಹತ್ತಿ ಗೆಲುವನ್ನರಸಿ ಹೊರಟ ಬೆಂಗಳೂರಿನ ಯುವ ಉದಯೋನ್ಮುಖ ಕಲಾವಿದರ ತಂಡ “ಶಿವಾಂಕಂ’. ಅಭಿಲಾಷ್‌ ಉಡುಪ, ಆದಿತ್ಯ ಗಾನವಳ್ಳಿ, ಮಾಳವಿಕಾ ಐತಾಳ್‌ ಹಾಗೂ ಮಧುರಾ ಕಾರಂತ ಈ ತಂಡದ ಕಲಾವಿದರು. ಪುತ್ತೂರಿನ ಮೂಕಾಂಬಿಕ ಕಲ್ಚರಲ್‌ ಅಕಾಡೆಮಿಯ ವತಿಯಿಂದ ನಡೆಯುವ “ನೃತ್ಯಾಂತರಂಗ’ ಸರಣಿ ಕಾರ್ಯಕ್ರಮದ 32ನೇ ಕುಸುಮವಾಗಿ ಶಿವಾಂಕಂ ತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನವು ನಡೆಯಿತು. 

Advertisement

ಪ್ರಥಮ ಪೂಜ್ಯನಾದ ಗಣೇಶನನ್ನು ಸ್ಮರಿಸುತ್ತಾ ಆರಂಭಿಸಿದ ಈ ನೃತ್ಯ ಅತ್ಯಂತ ರಭಸಯುತ ವಾಗಿದ್ದು ಆಕರ್ಷಕ ಭಂಗಿಗಳಿಂದ ಕೂಡಿ, ಕಾರ್ಯಕ್ರಮಕ್ಕೆ ಒಳ್ಳೆಯ ಆರಂಭವನ್ನು ನೀಡಿತು. ಮುಂದೆ ಮಧುರೈ ಮುರಳೀಧರ್‌ ರಚನೆಯ ಷಣ್ಮುಖಪ್ರಿಯ ರಾಗ ಹಾಗೂ ಏಕತಾಳದಲ್ಲಿನ “ಷಣ್ಮುಖ ಕೌತ್ವಂ’ ಒಂದನ್ನು ನರ್ತಿಸಿದರು. ಇದರ ಸಂಗೀತವು ಕೇಳಲು ಬಹಳ ಆಪ್ಯಾಯಮಾನ ವಾಗಿದ್ದುದಲ್ಲದೆ ನೃತ್ಯವು ಬಹಳ ಸುಂದರವಾಗಿ ಮೂಡಿಬಂದಿತು.

ಮುಂದೆ ದೇವಿ ಸ್ತುತಿಯ ನೃತ್ಯವನ್ನು ಮಾಡಲಾಯಿತು. ಇಲ್ಲಿ ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯ ಐಕ್ಯ ಸ್ವರೂಪಳಾದ ಆದಿಶಕ್ತಿಯನ್ನು ವರ್ಣಿಸಿದರು. ಈ ನೃತ್ಯದಲ್ಲಿ ಅನೇಕ ರಚನೆಗಳು ನೃತ್ಯವನ್ನು ಆಕರ್ಷಕ ವಾಗಿಸಿದವು. ಈ ನೃತ್ಯದ ಸಾಹಿತ್ಯ ಗೌಳ ರಾಗ ಹಾಗೂ ಆದಿತಾಳದಲ್ಲಿ ರಚನೆ  ಗೊಂಡಿದೆ. 

ಮುಂದೆ “ಶಂಕರ ಶ್ರೀಗಿರಿನಾಥ ಪ್ರಭೋ’ ಎಂಬ ಶಂಕರನ ಸ್ತುತಿ ಯನ್ನು ಹಂಸಾನಂದಿ ರಾಗ ಹಾಗೂ ಆದಿತಾಳದಲ್ಲಿ ನರ್ತಿಸ ಲಾಯಿತು. ಇಲ್ಲಿ ಶಂಕರನನ್ನು ವರ್ಣಿಸುತ್ತಾ, ಅತೀ ಕ್ಲಿಷ್ಟ ಭಂಗಿಗಳನ್ನು ಪ್ರದರ್ಶಿಸಿದರು. ಈ ನೃತ್ಯದಲ್ಲಿ ನಾಟ್ಯಶಾಸ್ತ್ರದ ಕರಣಗಳು ಹಾಗೂ ಚಾರಿಗಳು ಅತಿ ಸುಂದರವಾಗಿ ಮೂಡಿಬಂದವು. ಈ ನೃತ್ಯದ ಕೊನೆಯ ಚರಣದಲ್ಲಿ ಎಡಪಿನಲ್ಲಿ ಪ್ರಾರಂಭವಾಗುವ ಅಡವುಗಳು ಗಮನಾರ್ಹ ಭಾಗವಾಗಿತ್ತು. 

ಕೊನೆಯಲ್ಲಿ ತಿಲ್ಲಾನವೊಂದನ್ನು ರಾಗ ಬೆಹಾಗ್‌ ಹಾಗೂ ಆದಿತಾಳದಲ್ಲಿ ನರ್ತಿಸಲಾಯಿತು. ಇದರ ಸಂಗೀತವು ಬಾಲಮುರಳಿಕೃಷ್ಣ ವಿರಚಿತ. ಇವರ ಹೆಚ್ಚಿನ ರಚನೆಗಳು ಕ್ಲಿಷ್ಟ ತಾಳದಿಂದ ಕೂಡಿರುತ್ತವೆ. ಇದು ಕೂಡ ಎಡಪಿನಿಂದ ಪ್ರಾರಂಭವಾಗುತ್ತದೆ. ಅದನ್ನು ಕೊಂಚವೂ ಎಡವದಂತೆ, ಜಾಣ್ಮೆಯಿಂದ ನೃತ್ಯಗಾರರು ಅಭಿನಯಿಸಿದರು. ಇದು ನೃತ್ಯಗಾರರ ತಾಳ ಜ್ಞಾನ, ಲಯ ಸಾಮರ್ಥ್ಯ ಹಾಗೂ ಅವರ ಪರಿಶ್ರಮಕ್ಕೆ  ಕನ್ನಡಿಯಂತಿತ್ತು.

Advertisement

 ಈ ತಂಡ ಹೊಸದಾಗಿ ನೃತ್ಯಕ್ಷೇತ್ರದಲ್ಲಿ ಹೆಜ್ಜೆಯನ್ನಿಟ್ಟಿದೆ. ಗುರುವಿನ ಮೇಲಿನ ಭಕ್ತಿ ಒಬ್ಬ ವಿದ್ಯಾರ್ಥಿಯನ್ನು ಯಶಸ್ಸಿನ ಉತ್ತುಂಗಕ್ಕೊಯ್ಯಬಲ್ಲದು. ಇದೇ ರೀತಿ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ತಪೋನಿರತರಾದರೆ ಶ್ರೇಷ್ಠ ಕಲಾವಿದರಾಗಿ ಮೂಡಿ ಬರುವ ಸಾಮರ್ಥ್ಯ ಇವರಲ್ಲಿದೆ.

ಶ್ರೀಪದ್ಮಾ ಡಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next