ಮುಂಬಯಿ,: ಶ್ರೀಲಂಕಾದ ದಿಯಗಾಮದ ಮಹಿಂದ ರಾಜಪಕ್ಷ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಅ. 20ರಿಂದ ಅ. 21ರವರೆಗೆ ನಡೆದ 34ನೇ ಮರ್ಕಂಟೈಲ್ ಆ್ಯತ್ಲೆಟಿಕ್ ಫೆಡರೇಷನ್ ಚಾಂಪಿಯನ್‌ಶಿಪ್-2017ರಲ್ಲಿ ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಅವರು ಎರಡು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
5 ಸಾವಿರ ಮೀ. ಹಾಗೂ 1,500 ಮೀ. ಟ್ರ್ಯಾಕ್ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನದೊಂದಿಗೆ ಎರಡು ಕಂಚಿನ ಪದಕಗಳನ್ನು ತನ್ನದಾಗಿಸಿ ಕೊಂಡಿದ್ದಾರೆ. ಅಲ್ಲದೆ 800 ಮೀ. ಟ್ರ್ಯಾಕ್ ಈವೆಂಟ್‌ನಲ್ಲಿ ನಾಲ್ಕನೇ ಸ್ಥಾನ, 400 ಮೀ. ರಿಲೇ ಓಟದಲ್ಲಿ 5ನೇ ಸ್ಥಾನ ಗಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮರ್ಕಂಟೈಲ್ ಆ್ಯತ್ಲೆಟಿಕ್ ಫೆಡರೇಷನ್‌ನ ಅಧ್ಯಕ್ಷ ಸಿಡ್ನಿ ರತ್ನಾಯಕೆ, ಗೌರವ ಪ್ರಧಾನ ಕಾರ್ಯದರ್ಶಿ ಟೊರ್ನಾಡೋ ಜಯಸುಂದರ ಹಾಗೂ ಗಣ್ಯರು ಶಿವಾನಂದ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭ ಹಾರೈಸಿದರು.
ಕಳೆದ ಮೂರು ವರ್ಷಗಳಿಂದ ಸತತ ಮೂರನೇ ಬಾರಿ ಅಂತಾರಾಷ್ಟ್ರೀಯ ಮಾಸ್ಟರ್ ಆ್ಯತ್ಲೆಟಿಕ್ ನಲ್ಲಿ ಶಿವಾನಂದ ಶೆಟ್ಟಿ ಅವರು ಭಾಗ ವಹಿಸಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ವಸಾಯಿಯ ಡಿಸಿ ಕ್ಲಬ್ ಆಯೋಜನೆಯಲ್ಲಿ ಅ. 15ರಂದು ಬೆಳಗ್ಗೆ ವಸಾಯಿಯಲ್ಲಿ ಆಯೋಜಿಸಿದ್ದ 35-45 ವರ್ಷ ವಯೋಮಿತಿಯ ವಿಭಾಗದಲ್ಲಿ “ರನ್ ಫಾರ್ ಹೆಲ್ತ್ ರನ್ ಫಾರ್ ಫಿಟೆ°ಸ್’ 10 ಕಿ. ಮೀ. ಮ್ಯಾರಥಾನ್‌ನಲ್ಲಿ ಶಿವಾನಂದ ಶೆಟ್ಟಿ ಅವರು ದ್ವಿತೀಯ ಪ್ರಶಸ್ತಿಗೆ ಭಾಜನರಾಗಿದ್ದರು. ಸೆಪ್ಟೆಂಬರ್ 17 ರಂದು ತಿರುಪತಿಯಲ್ಲಿ ನಡೆದ ತಿರುಪತಿ ಹಾಫ್ ಮ್ಯಾರಥಾನ್‌ನ 21 ಕಿ. ಮೀ. ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಅ. 8ರಂದು ನಾಸಿಕ್‌ನಲ್ಲಿ ನಡೆದ ಲೋಕಸತ್ತ ಮಹಾ ಮ್ಯಾರಥಾನ್‌ನಲ್ಲಿ 18ರಿಂದ 45 ವರ್ಷದೊಳಗಿನ ವಿಭಾಗದಲ್ಲಿ 18ನೇ ಸ್ಥಾನವನ್ನು ಪಡೆದಿದ್ದರು. ಅ. 1ರಂದು ಇಂಧೋರ್‌ನಲ್ಲಿ ನಡೆದ ಟೆನ್‌ಕೆ ಸಿಟಿ ಮ್ಯಾರಥಾನ್‌ನಲ್ಲಿ 5ನೇ ಸ್ಥಾನ, ಸೆ. 24ರಂದು ಪುಣೆಯಲ್ಲಿ ನಡೆದ ಇಂಟರ್‌ಸಿಟಿ ಮ್ಯಾರಥಾನ್‌ನಲ್ಲಿ 3ನೇ ಸ್ಥಾನ, ಸೆ. 10 ರಂದು ಸಯಾನ್‌ನಲ್ಲಿ ನಡೆದ ರಿವರ್ಸ್ ರನ್ ಮ್ಯಾರಥಾನ್‌ಲ್ಲಿ ಮೊದಲನೇ ಸ್ಥಾನವನ್ನು ಪಡೆದಿದ್ದರು.