Advertisement

ಗಾಂಧಿನಗರದಲ್ಲೊಂದು “ಶಿವಾನಂದ ಸರ್ಕಲ್‌’

09:55 AM Nov 25, 2019 | Lakshmi GovindaRaj |

ನೀವೇನಾದರೂ ಬೆಂಗಳೂರಿಗರಾದರೆ ಅಥವಾ ಹೊರಗಿನವರಾಗಿದ್ದರೂ ಯಾವಾಗಲಾದರೂ ಒಮ್ಮೆ ಬೆಂಗಳೂರನ್ನು ಒಂದು ಸುತ್ತು ಹಾಕಿದ್ದರೆ, “ಶಿವಾನಂದ ವೃತ್ತ’ ಎಂಬ ಹೆಸರನ್ನು ನೀವು ಖಂಡಿತ ಕೇಳಿರುತ್ತೀರಿ. ಸಿಲಿಕಾನ್‌ ಸಿಟಿಯ ಪ್ರಸಿದ್ದ ಲ್ಯಾಂಡ್‌ಮಾರ್ಕ್‌ಗಳಲ್ಲಿ ಶೇಷಾದ್ರಿಪುರಂ ಸಮೀಪವಿರುವ “ಶಿವಾನಂದ ವೃತ್ತ’ ಕೂಡ ಒಂದು. ಈಗ ಇದೇ “ಶಿವಾನಂದ ಸರ್ಕಲ್‌’ ಎಂಬ ಹೆಸರನ್ನು ಇಟ್ಟುಕೊಂಡು ಚಿತ್ರವೊಂದು ತಯಾರಾಗುತ್ತಿದೆ.

Advertisement

ಆರು ಜನ ಮಧ್ಯ ವಯಸ್ಕ ಗಂಡಸರು ತಮ್ಮ ಜವಾಬ್ದಾರಿಯನ್ನು ಮರೆತು ಬೇಜವಾಬ್ದಾರಿಯಿಂದ ನಡೆದುಕೊಂಡರೆ, ಅವರ ಕುಟುಂಬದವರ ಗತಿ ಏನಾಗುತ್ತದೆ. ಈ ಗಂಡಸರನ್ನು ನಂಬಿಕೊಂಡ ಅವರ ಹೆಂಡತಿ-ಮಕ್ಕಳ ಮೇಲೆ ಅದರ ಪರಿಣಾಮ ಏನಾಗುತ್ತದೆ ಅನ್ನೋದೆ “ಶಿವಾನಂದ ಸರ್ಕಲ್‌’ ಚಿತ್ರದ ಕಥಾ ಹಂದರ. ಹೆಂಡತಿ-ಮಕ್ಕಳು ಮಲಗಿರುವಾಗ ಮನೆಗೆ ಬರುವ ಗಂಡಸರು, ಬೆಳಿಗ್ಗೆ ಮನೆಯವರೆಲ್ಲರೂ ಏಳುವ ಮುನ್ನವೇ ಮನೆಯಿಂದ ಹೊರ ಹೋಗುತ್ತಾರೆ.

ಅಬ್ಬೆಪಾರಿಗಳಂತೆ ಪ್ರತಿ ದಿನವನ್ನು “ಶಿವಾನಂದ ವೃತ್ತ’ ಎಂಬ ಸ್ಥಳದಲ್ಲಿ ಕಳೆಯುತ್ತಿರುತ್ತಾರೆ. ಒಂದು ಹಂತದಲ್ಲಿ, ಈ ತಂಡದ ಸದಸ್ಯನಿಂದಲೇ ಎಲ್ಲರ ಬದುಕಿನಲ್ಲೂ ತಿರುವು ಬರುತ್ತದೆ. ಈ ಎಲ್ಲಾ ಗಂಡಸರ ಜೀವನದ ಏಳು-ಬೀಳುಗಳಿಗೆ “ಶಿವಾನಂದ ವೃತ್ತ’ ಮೂಕ ಸಾಕ್ಷಿಯಾಗಿರುತ್ತದೆ. ಅದು ಹೇಗೆ ಅನ್ನೋದೆ “ಶಿವಾನಂದ ಸರ್ಕಲ್‌’ ಚಿತ್ರ ಎನ್ನುತ್ತದೆ ಚಿತ್ರತಂಡ. ಹಳೇ ಬೇರು ಹೊಸ ಚಿಗುರು ಎನ್ನುವಂತೆ “ಶಿವಾನಂದ ವೃತ್ತ’ ಚಿತ್ರ ಹಳೆಯ ಮತ್ತು ಹೊಸಬರ ಸಮಾಗಮದಲ್ಲಿ ಮೂಡಿಬರುತ್ತಿದೆ.

ನವ ಪ್ರತಿಭೆಗಳಾದ ರಂಗಸ್ವಾಮಿ, ಶಿವಪ್ಪ ಕುಡ್ಲೂರು, ಶಿವಕುಮಾರ್‌ ಜೀವರ್ಗಿ, ಕೆ.ಟಿ.ಮುನಿರಾಜು, ಪದ್ಮನಾಭ ಮತ್ತು ಆನಂದ್‌ ಕೃಷ್ಣ. ಇವರೊಂದಿಗೆ ಹಿರಿಯ ಕಲಾವಿದರುಗಳಾದ ಶಂಕರ್‌ ಭಟ್‌, ಕೃಷ್ಣಮೂರ್ತಿ ತಲ್ವಾರ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಪಿಲ್‌ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ಐದನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಸಿ. ನಾರಾಯಣ್‌ ಛಾಯಾಗ್ರಹಣವಿದೆ.

ಸಿ. ಸುದರ್ಶನ್‌, ಉದಯಲೇಖಾ, ಶಿವಪ್ಪ ಕುಡ್ಲೂರು ಸಾಹಿತ್ಯದ ನಾಲ್ಕು ಹಾಡುಗಳಿಗೆ ಗೋಪಿ ಕಲಾಕಾರ್‌ ಸಂಗೀತ ಒದಗಿಸುತ್ತಿದ್ದಾರೆ. ಈ ಪೈಕಿ ಕಲಾವಿದರುಗಳಿಂದಲೇ ಗೀತೆಗಳನ್ನು ಹಾಡಿಸುತ್ತಿರುವುದು ವಿಶೇಷ. ಇತ್ತೀಚೆಗೆ ಶಿವಾನಿ-ಪದ್ಮನಾಬ್‌ ಹಾಡುವ ಹಾಡಿನ ಧ್ವನಿಮುದ್ರಣ ಕಾರ್ಯಕ್ರಮವು ಪ್ರಸಾದ್‌ ಲ್ಯಾಬ್‌ನಲ್ಲಿ ಸರಳವಾಗಿ ನಡೆಯಿತು. ಶೀಘ್ರದಲ್ಲಿಯೇ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಹೊರಡಲಿರುವ ಚಿತ್ರತಂಡ, ಬೆಂಗಳೂರಿನ ಸರ್ಕಲ್‌ ಒಂದರಲ್ಲಿ ಸುಮಾರು 25 ದಿನಗಳ ಕಾಲ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next