Advertisement

ಒಲಂಪಿಕ್‌ ಕ್ರೀಡಾಕೂಟದ ಯಶಸ್ಸಿಗೆ ಕರೆ

03:17 PM Oct 17, 2019 | Naveen |

ಶಿವಮೊಗ್ಗ: ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನ. 23ರಿಂದ 30ರವರೆಗೆ ನಡೆಯಲಿರುವ ರಾಜ್ಯಮಟ್ಟದ ಒಲಂಪಿಕ್‌ ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಎಲ್ಲರೂ ಕೈ ಜೋಡಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದರು.

Advertisement

ಬುಧವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಕ್ರೀಡಾಕೂಟದ ಆಯೋಜನೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಾಸ್ತವ್ಯ, ಊಟ ಉಪಾಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಎಲ್ಲಾ ಕ್ರೀಡಾಸಂಸ್ಥೆಗಳು ಸಕ್ರಿಯವಾಗಿ ಜವಾಬ್ದಾರಿ ವಹಿಸಿಕೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು.

ಕ್ರೀಡಾಕೂಟದ ಆಯೋಜನೆಗೆ ಪೂರ್ವದಲ್ಲಿ ಕ್ರೀಡಾಂಗಣವನ್ನು ಸುಸಜ್ಜೀಕರಣಗೊಳಿಸಬೇಕು. ದುರಸ್ತಿ ಕಾರ್ಯಗಳಿದ್ದರೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಕ್ರೀಡಾಕೂಟದ ಬಳಿಕ ಕ್ರೀಡಾ ಸಾಮಗ್ರಿಗಳನ್ನು ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಒಲಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 4 ಸಾವಿರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಶಿವಮೊಗ್ಗ ಹಾಗೂ ಕೆಲವು ತಾಲೂಕು ಕೇಂದ್ರಗಳಲ್ಲಿ ಕೆಲವು ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

Advertisement

ಅಥ್ಲೆಟಿಕ್ಸ್‌, ಸ್ವಿಮ್ಮಿಂಗ್‌, ರೆಸ್ಲಿಂಗ್‌, ಆರ್ಚರಿ, ಫೆನ್ಸಿಂಗ್‌, ಸೈಕ್ಲಿಂಗ್‌, ಜೂಡೋ, ಹಾಕಿ, ಬ್ಯಾಡ್ಮಿಂಟನ್‌, ನೆಟ್‌ಬಾಲ್‌, ಬಾಲ್‌ಬ್ಯಾಡ್ಮಿಟನ್‌ ಸೇರಿದಂತೆ 25 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗಳನ್ನು ನಡೆಸಬಹುದಾದ ಸ್ಥಳಗಳ ಪರಿಶೀಲನೆ ನಡೆಸಲಾಗಿದ್ದು, ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಕೃಷಿ ವಿಶ್ವವಿದ್ಯಾಲಯ, ಪೆಸೆಟ್‌ ಕಾಲೇಜು, ಡಿವಿಎಸ್‌ ಕಾಲೇಜು, ಅಕ್ಷರ ಒಳಾಂಗಣ ಕ್ರೀಡಾಂಗಣಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್‌ ಮಾತನಾಡಿ, ಶಿವಮೊಗ್ಗದಲ್ಲಿ ಕ್ರೀಡಾಕೂಟ ಆಯೋಜನೆಯಿಂದ ಸ್ಥಳೀಯವಾಗಿ ಕ್ರೀಡಾ ಮೂಲ ಸೌಕರ್ಯಗಳ ಉನ್ನತೀಕರಣ ಸಾಧ್ಯವಿದೆ. ಹಾಗೂ ಸ್ಥಳೀಯ ಕ್ರೀಡಾಪಟುಗಳ ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಮಾತನಾಡಿ, ಕ್ರೀಡಾಪಟುಗಳಿಗೆ ವಾಸ್ತವ್ಯಕ್ಕಾಗಿ ಈಗಾಗಲೇ ಪೂರ್ವಭಾವಿ ಸಿದ್ಧತೆ ನಡೆಸಲಾಗಿದೆ. ಶಿವಮೊಗ್ಗ ನಗರದಲ್ಲಿ 450, ಸಾಗರದಲ್ಲಿ 300 ಹಾಗೂ ಭದ್ರಾವತಿಯಲ್ಲಿ 100 ಹೊಟೇಲ್‌ ರೂಮ್‌ಗಳನ್ನು ಗುರುತಿಸಲಾಗಿದ್ದು, ಹಾಸ್ಟೆಲ್‌ಗ‌ಳು ಸೇರಿದಂತೆ ವಾಸ್ತವ್ಯಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು, ಸಿಇಒ ವೈಶಾಲಿ, ಶಾಸಕ ಅಶೋಕ ನಾಯ್ಕ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ಕರ್ನಾಟಕ ರಾಜ್ಯ ಒಲಂಪಿಕ್‌ ಸಂಸ್ಥೆ ಕಾರ್ಯದರ್ಶಿ ಅನಂತರಾಜು, ಅರುಣ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next