ಸಾಗರ: ಆಕರ್ಷಕ ಕಲಾಕೃತಿ ಕೆತ್ತುವ ಕೌಶಲ್ಯ ಹೊಂದಿರುವ ಗುಡಿಗಾರರ ಬದುಕು ಕೊರೊನಾ ಸಾಂಕ್ರಾಮಿಕದ ಲಾಕ್ ಡೌನ್ ಪರಿಣಾಮದಿಂದ ಹೈರಾಣಾಗಿದೆ. ಕಲಾಕೃತಿಗಳ ನಿರ್ಮಾಣಕ್ಕೆ ಸಾಕಷ್ಟು ಅವಕಾಶವಿದ್ದರೂ ಮಾರುಕಟ್ಟೆ ಇಲ್ಲದ ಕಾರಣ ಕಳೆದ 2 ವರ್ಷಗಳಿಂದ ಜೀವನ ನಿರ್ವಹಣೆಗೂ ಅಗತ್ಯವಾದ ಕನಿಷ್ಠ ಆದಾಯವಿಲ್ಲದ ದುಸ್ಥಿತಿ ಇದೆ.
ಕೆಳದಿ ರಸ್ತೆಯಲ್ಲಿನ ಶ್ರೀಗಂಧದ ಸಂಕೀರ್ಣ ಸೇರಿದಂತೆ ತಾಲೂಕಿನ ಕರಕುಶಲಕರ್ಮಿಗಳ ಕುಶಲ ಕೇಳುವವರಿಲ್ಲದಂತಾಗಿದೆ. ಕಳೆದ ವರ್ಷ ಹಾಗೂ ಈ ಬಾರಿಯ ಲಾಕ್‌ಡೌನ್ ಅವ ಧಿಯಲ್ಲಿ ಗುಡಿಗಾರರ ಸಲಕರಣೆಗಳು ಸಪ್ಪಳ ಮಾಡಿಲ್ಲ. ಕಲಾಕೃತಿಗಳ ನಿರ್ಮಾಣ ಕಾರ್ಯ ಆಗಿಲ್ಲ. ದಿನಗಟ್ಟಲೆ ಕುಳಿತು ಕೆತ್ತಿ ನಿರ್ಮಿಸಿದ ಕಲಾಕೃತಿಗಳಿಗೆ ಮಾರುಕಟ್ಟೆ ಇರಲಿಲ್ಲ. ಖರೀದಿ ಇಲ್ಲವಾದುದರಿಂದ ಆದಾಯ ಇಲ್ಲದ ದುಸ್ಥಿತಿಯಲ್ಲಿ ಕರಕುಶಲಕರ್ಮಿಗಳು ದಿನ ದೂಡುತ್ತಿದ್ದಾರೆ. ಶ್ರೀಗಂಧದ ಸಂಕೀರ್ಣದ ವ್ಯಾಪ್ತಿಯಲ್ಲಿನ 125ಕ್ಕೂ ಹೆಚ್ಚು ಕುಟುಂಬಗಳು, ನಗರ ಮತ್ತು ಗ್ರಾಮಾಂತರದ ಗುಡಿಗಾರರ ಕುಟುಂಬಗಳಲ್ಲಿ ಕೊರೊನಾ ಸಂಕಟ ಮೂಡಿಸಿದೆ. ಕಲ್ಲು, ಮರ ಕೆತ್ತನೆ ಮೂಲಕ ಆಕರ್ಷಕ ಕಲಾಕೃತಿ ನಿರ್ಮಿಸುವ ಕುಶಲಕರ್ಮಿಗಳ ಆದಾಯಕ್ಕೆ ಬಲವಾದ ಪೆಟ್ಟು ಬಿದ್ದಿದೆ.
ಗುಡಿಗಾರರ ಸಹಕಾರ ಸಂಘದ ಮಳಿಗೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿನ ಕರಕುಶಲ ವಸ್ತು, ಶ್ರೀಗಂಧದ ಹಾಗೂ ಬೀಟೆಯ ಸುಂದರ ಕಲಾಕೃತಿಗಳ ಮಾರಾಟ ಮಳಿಗೆಗಳು ತಿಂಗಳುಗಟ್ಟಲೆ ಬಾಗಿಲು ಮುಚ್ಚಿವೆ. ಆದಾಯವಿಲ್ಲದ ದುಸ್ಥಿತಿಯಲ್ಲಿ ಮಳಿಗೆಗಳ ಮಾಲೀಕರಿದ್ದಾರೆ. ತಿಂಗಳುಗಳ ಕಾಲ ವ್ಯಾಪಾರ ಇಲ್ಲದಿದ್ದರೂ ಬಾಡಿಗೆ ಕಟ್ಟುವ ಸಂಕಟ ಅವರದ್ದಾಗಿದೆ. ಕೆಲವು ಮಾಲೀಕರಿಗೆ ಗೋದಾಮು ಹಾಗೂ ಮಳಿಗೆ ಸೇರಿ ತಿಂಗಳಿಗೆ 15 ಸಾವಿರ ರೂ. ಬಾಡಿಗೆ ಕಟ್ಟಬೇಕಾಗಿದೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಲಾಕ್ ಡೌನ್ ಅವಧಿಯಲ್ಲಿ ಗುಡಿಗಾರರ ಹಿತ ಕಾಪಾಡುವ ಹೊಣೆಗಾರಿಕೆ ನಿರ್ಲಕ್ಷಿಸಿದೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ನಿಗಮದ ಅ ಧಿಕೃತ ಕಾರ್ಡ್ ಹೊಂದಿರುವ 250 ಗುಡಿಗಾರರಿಗೆ ತಲಾ ಎರಡು ಸಾವಿರ ರೂ. ಸಹಾಯಧನ ನೀಡಿತ್ತು. ಆದರೆ ಈ ಬಾರಿ ಅಂತಹ ಯಾವುದೇ ನೆರವು ಇಲ್ಲವಾಗಿದೆ.
ನಿಗಮದ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಸರ್ಕಾರದ ಪ್ಯಾಕೇಜ್‌ನಿಂದ ಸಹ ಗುಡಿಗಾರರು ವಂಚಿತರಾಗಿದ್ದಾರೆ. ಈ ಬಾರಿ ನಿಗಮ ನೆರವಿಗೆ ಬಾರದಿರುವುದು ಗುಡಿಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ಥಳೀಯವಾಗಿ ನಗರಸಭೆ ವಾರ್ಡ್ ವ್ಯಾಪ್ತಿ ನೀಡಿದ ಆಹಾರ ಕಿಟ್ ಸಹಾಯದಲ್ಲಿ ಶ್ರೀಗಂಧದ ಸಂಕೀರ್ಣದ ನಿವಾಸಿಗಳಲ್ಲಿ 18 ಜನರಿಗೆ ಕೊಡುವ ಸಂಬಂಧ ಪಟ್ಟಿ ಸಿದ್ಧಗೊಳಿಸಲಾಗಿತ್ತು. ವಾರ್ಡ್ ವ್ಯಾಪ್ತಿಯ ಎಲ್ಲ ಬಡವರಿಗೂ ಕಿಟ್ ನೀಡಬೇಕಾದ ಹಿನ್ನೆಲೆಯಲ್ಲಿ ಇಂತಹ ಆಯ್ಕೆ ಅನಿವಾರ್ಯ.
ನಗರಸಭೆ ನೀಡುವ ಕಿಟ್ ಶ್ರೀಗಂಧದ ಸಂಕೀರ್ಣದ ಕೆಲವೇ ಕೆಲವು ನಿವಾಸಿಗಳಿಗೆ ದೊರಕುತ್ತಿರುವುದರಿಂದ ಮೊದಲಿಗೆ ನಿರಾಕರಿಸಲಾಗಿತ್ತು. ಕಿಟ್ ಅಗತ್ಯವುಳ್ಳವರು 70ಕ್ಕೂ ಹೆಚ್ಚು ಕುಟುಂಬದವರಿದ್ದು, ಕೇವಲ 20 ಜನರಿಗೆ ಮಾತ್ರ ದೊರಕುವುದು ಸಮಂಜಸವಲ್ಲ ಎಂದು ಗುಡಿಗಾರರು ನಗರಸಭೆ ಕಿಟ್‌ಗಳನ್ನು ನಿರಾಕರಿಸುವ ತೀರ್ಮಾನ ಮಾಡಿದ್ದರು.
ವಾರ್ಡ್ ಸದಸ್ಯ ಶಂಕರ ಫಲಾನುಭವಿಗಳನ್ನು ಸಂಪರ್ಕಿಸಿದ ನಂತರ 20 ಕುಟುಂಬಕ್ಕೆ ಕಿಟ್ ನೀಡಲಾಗಿದೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಂದ ಕಿಟ್ ನೆರವು ದೊರಕಿದೆ.