ಶಿವಮೊಗ್ಗ: ಜಿಲ್ಲೆಯು 15 ತಿಂಗಳ ಅವಧಿಯಲ್ಲಿ ನಾಲ್ಕು ಚುನಾವಣೆಗೆ ಸಾಕ್ಷಿಯಾಗಿದೆ. ಪ್ರತಿ ಚುನಾವಣೆಯಲ್ಲೂ ಕನಿಷ್ಟ ಒಂದೂವರೆ ಎರಡು ತಿಂಗಳು ನೀತಿ ಸಂಹಿತೆ ಜಾರಿಯಾಗಿದ್ದರಿಂದ ಜಿಲ್ಲೆಯ
ಅಭಿವೃದ್ಧಿಗೆ ಗರ ಬಡಿದಿದೆ. ಈಗ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆಯು ಮೇ. 25ರವರೆಗೆ ಇರುವುದರಿಂದ ಒಟ್ಟು 15 ತಿಂಗಳ ಅವಧಿಯಲ್ಲಿ ಜಿಲ್ಲೆ 8 ತಿಂಗಳು ನೀತಿ ಸಂಹಿತೆ ಒಳಪಟ್ಟಿದೆ.
2018ನೇ ಮಾರ್ಚ್ ಕಡೇ ವಾರ ವಿಧಾನಸಭೆ ಚುನಾವಣೆಯಿಂದ ಆರಂಭವಾದ ನೀತಿ ಸಂಹಿತೆ ಜೂನ್ 13ಕ್ಕೆ ವಿಧಾನ ಪರಿಷತ್ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆವರೆಗೆ ಜಾರಿಯಲ್ಲಿತ್ತು. ಅದಾಗಿ ಒಂದೇ ತಿಂಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ನೀತಿ ಸಂಹಿತೆಯು ಜುಲೈ ಕಡೇ ವಾರದಿಂದ ಆಗಸ್ಟ್ ಕಡೆಯವರೆಗೆ ಜಾರಿಯಲ್ಲಿತ್ತು. ಅನಿರೀಕ್ಷಿತವಾಗಿ ಬಂದ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯು ಅಕ್ಟೋಬರ್ ಮೊದಲ ವಾರದಿಂದ ನ.7ರವರೆಗೆ ಜಾರಿಯಲ್ಲಿತ್ತು. ನಾಲ್ಕು ತಿಂಗಳ ಬಳಿಕ ಮತ್ತೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯು ಮಾ.10ರಿಂದ ಜಾರಿಯಾಗಿದ್ದು ಮೇ 25ರವರೆಗೆ ಇರಲಿದೆ.
ನೀತಿ ಸಂಹಿತೆ ಅವ ಧಿಯಲ್ಲಿ ಯಾವುದೇ ಯೋಜನೆ ಘೋಷಣೆ, ಉದ್ಘಾಟನೆ, ಶಂಕುಸ್ಥಾಪನೆಗಳು ಇರುವುದಿಲ್ಲ. ಜತೆಗೆ ಯಾವುದೇ ಸ್ಥಳೀಯ ಸಂಘ-ಸಂಸ್ಥೆಗಳ ಸಭೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ. ತುರ್ತು ಅವಶ್ಯಕತೆಗಳಾದ ಕುಡಿಯುವ ನೀರು, ಆರೋಗ್ಯ ವಿಷಯಗಳಿಗೆ ಮಾತ್ರ ನಿರ್ಧಾರ ಕೈಗೊಳ್ಳಲು ಜನಪ್ರತಿನಿಧಿಗಳಿಗೆ ಅವಕಾಶವಿರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ. 2018ನೇ ಫೆಬ್ರವರಿಯಿಂದ ಇಲ್ಲಿವರೆಗೆ ತಾಪಂಗಳು ಮತ್ತು ಜಿಪಂನಲ್ಲಿ ಸಾಮಾನ್ಯ ಸಭೆಗಳು ಮತ್ತು ಕೆಡಿಪಿ ಸಭೆಗಳು ನಡೆದದ್ದು ಬಹಳ ಕಡಿಮೆ. ಪ್ರತಿ ತಿಂಗಳು ನಡೆಯಬೇಕಾದ ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳನ್ನು ನಡೆಸಬೇಕಾದ ತಾಪಂ ಮತ್ತು ಜಿಪಂನಲ್ಲಿ ಈ ವರ್ಷ ಕನಿಷ್ಟ 5 ಸಾಮಾನ್ಯ ಸಭೆ ಮತ್ತು ಕೆಡಿಪಿ ಸಭೆಗಳನ್ನು ನಡೆಸಲಾಗಿಲ್ಲ. ಮಹಾನಗರ ಪಾಲಿಕೆ ಚುನಾವಣೆ ನಂತರ ಲೋಕಸಭೆ ಉಪಚುನಾವಣೆ ಬಂದಿದ್ದರಿಂದ ಅಧಿ ಕಾರ ಸ್ವೀಕಾರಕ್ಕೆ ಮೂರು ತಿಂಗಳು ಕಾಯಬೇಕಾಯಿತು. ಈಗ ಪಾಲಿಕೆ ಬಜೆಟ್ ಮಂಡನೆ ಮಾಡಿದ್ದು ಅದರ ಕಾಮಗಾರಿಗಳು ಏಪ್ರಿಲ್‌ನಿಂದ ಅನುಷ್ಠಾನಗೊಳ್ಳಬೇಕಿದೆ. ಅದಕ್ಕೂ ಮೇ 25ರವರೆಗೂ ಕಾಯಬೇಕಿದೆ!
ಈ ಮಧ್ಯೆ ಜಿಪಂನಲ್ಲಿ ಸ್ಥಾಯಿ ಸಮಿತಿ ಅಧಿಕಾರಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದು ಸುಮಾರು 9 ತಿಂಗಳ ಅಂದರೆ ನವೆಂಬರ್ ಕಡೆಯವರೆಗೆ ಸಾಮಾನ್ಯ ಸಭೆಯೇ ನಡೆದಿರಲಿಲ್ಲ. ಕಳೆದ 14 ತಿಂಗಳಲ್ಲಿ ಜಿಪಂನಲ್ಲಿ ನಡೆದಿರುವುದು ಕೇವಲ 3 ಸಾಮಾನ್ಯ ಸಭೆ. ಈಗ ಇನ್ನೂ ಮೂರು ತಿಂಗಳ ಸಭೆ ನಡೆಸಲು ಅವಕಾಶ ಇಲ್ಲದಂತಾಗಿದೆ.
ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ತಿಂಗಳು ಪೂರ್ತಿ ಕೆಲಸ ಕೊಡಲು ಈಚೆಗೆ ಕೇಂದ್ರ ಉಕ್ಕು ಪ್ರಾಧಿಕಾರದಿಂದ ಅನುಮತಿ ದೊರೆತಿತ್ತು. ಆದರೆ ಅದು ಸಹ ಅನುಷ್ಠಾನವಾಗುವ ಲಕ್ಷಣಗಳಿಲ್ಲ. ನಗರ ಅನೇಕ ಕಡೆ ಆರಂಭವಾಗಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಸಹ ಸ್ಥಗಿತಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬರ ಪರಿಹಾರ ಕಾಮಗಾರಿಗಳಿಗೆ ತುರ್ತು ಅನುಮೋದನೆ ಕೊಡುವಂತೆ ಜಿಪಂ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದರೂ ಬಹುತೇಕ ಕಾಮಗಾರಿಗಳು ಇನ್ನೂ ಆರಂಭವಾಗಿರಲಿಲ್ಲ. ನೀತಿ ಸಂಹಿತೆ ಮುಗಿಯವವರೆಗೂ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುವುದು ಅನುಮಾನ.
ಬರಲಿದೆ ಸ್ಥಳೀಯ ಸಂಸ್ಥೆ ಕದನ
ಲೋಕಸಭೆ ಚುನಾವಣೆ ನಂತರ ಶಿವಮೊಗ್ಗ ಮಹಾನಗರ ಪಾಲಿಕೆ ಹೊರತುಪಡಿಸಿ ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ನಗರಸಭೆ, ಪುರಸಭೆ, ಪಪಂಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಹಾಗಾಗಿ ಮುಂದಿನ 5 ತಿಂಗಳು ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ.
ಅಧಿಕಾರಿಗಳ ಚೆಲ್ಲಾಟ!
ಸರ್ಕಾರಿ ಯೋಜನೆಗಳ ಕುರಿತಂತೆ ನೀತಿಸಂಹಿತೆ ಅಡ್ಡಿಯಾದರೂ ಸಾರ್ವಜನಿಕರ ಕೆಲಸಗಳಿಗೂ ನೀತಿ ಸಂಹಿತೆ ಬಿಸಿ ತಾಗುತ್ತಿದೆ. ಅರ್ಜಿಗಳನ್ನು ಹಿಡಿದು ಕಚೇರಿಗೆ ಹೋಗುವ ಸಾರ್ವಜನಿಕರಿಗೆ ‘ಸಾಹೇಬರು ಚುನಾವಣಾ ಕರ್ತವ್ಯಕ್ಕೆ ಹೋಗಿದ್ದಾರೆ ನಾಳೆ ಬನ್ನಿ’ ಎಂಬ ಸಿದ್ಧ ಉತ್ತರ ಸಿಗುತ್ತಿವೆ. ಅನೇಕ ಅಧಿಕಾರಿಗಳು ಇದನ್ನೇ ನೆಪವಾಗಿಟ್ಟುಕೊಂಡು ಚುನಾವಣಾ ಕೆಲಸ
ಮುಗಿದರೂ ಕಚೇರಿಗೆ ಹಾಜರಾಗುತ್ತಿಲ್ಲ ಎಂಬ ದೂರುಗಳಿವೆ.
ಶರತ್ ಭದ್ರಾವತಿ