ಸಾಗರ: ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡುವ ಅಗತ್ಯವಿದ್ದು, ಕೊಲೆಗಾರರಿಗೆ ಮಾತ್ರ ಶಿಕ್ಷೆಯಾದರೆ ಸಾಲದು. ಅದರ ಹಿಂದೆ ಇರಬಹುದಾದ ಷಡ್ಯಂತ್ರ ಬಯಲಾಗಬೇಕಿದೆ ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹಕ್ರೆ ಆಗ್ರಹಿಸಿದ್ದಾರೆ.
ತಾಲೂಕಿನ ಕರೂರು ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ತುಮರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುತ್ವದ ಮೇಲೆ ರಾಜಕೀಯ ಮಾಡುವ ಬಿಜೆಪಿ ಸರ್ಕಾರವಿದ್ದಾಗ ಈ ರೀತಿ ಘಟನೆ ಸಂಭವಿಸಿದೆ. ಶಿವಮೊಗ್ಗ ಇತಿಹಾಸದಲ್ಲಿ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳಲು ಕೊಲೆ ನಡೆದ ಇತಿಹಾಸವಿದ್ದು ಮೊನ್ನೆ ಘಟನೆಯೂ ಕೂಡ ಈ ಸಾಮ್ಯತೆ ಹೊಂದಿದೆ ಎಂದು ಅವರು ಆರೋಪಿಸಿದರು.
ಪ್ರಭಾವಿ ಸಚಿವರ ರಾಜಿನಾಮೆ ಒತ್ತಾಯ ನಡೆಯುತ್ತಾ ಇರುವಾಗಲೇ ಈ ಘಟನೆ ಸಂಭವಿಸಿದೆ. ಕೊಲೆ ಮಾಡಿದವರು ಸಿಕ್ಕಿಸಿ ಮಾಡಿಸಿದವರು ಸುರಕ್ಷಿತವಾಗುವಷ್ಟು ಪ್ರಭಾವ ಹೊಂದಿದಾಗ ಮಾತ್ರ ಇವೆಲ್ಲ ಸಾದ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನಿವೃತ ನ್ಯಾಯಮೂರ್ತಿಗಳು ಅಥವಾ ಇನ್ನೂ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಒತ್ತಾಯಿಸಿದರು.
ಕೊಲ್ಲುವುದು ಯಾವ ಧರ್ಮದವರು ಮಾಡಿದರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೊಲೆಗಾರರಿಗೆ ನಿರ್ದಿಷ್ಟ ಧರ್ಮ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವು ಅಮಾನವೀಯವಾಗಿದ್ದು ತಪ್ಪಿತಸ್ತರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದ ಹಾಗೆ ಪೊಲೀಸ್ ಇಲಾಖೆ ಅಗತ್ಯ ಸಾಕ್ಷಾಧಾರ ಜತೆ ನ್ಯಾಯಾಲಯದಲ್ಲಿ ರುಜುವಾತು ಮಾಡಬೇಕು ಎಂದರು.
ತುಮರಿ ಘಟಕದ ಅಧ್ಯಕ್ಷ ಓಂಕಾರ ಜೈನ್, ತುಮರಿ ಗ್ರಾಪಂ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಮಹಿಳಾ ಘಟಕದ ಲಿಲ್ಲಿ ಮನೋಹರ್, ಪಂಚಾಯ್ತಿ ಸದಸ್ಯರಾದ ಶ್ರೀಧರಮೂರ್ತಿ, ಪ್ರೇಮ ಸಂತೋಷ್, ಮಾಜಿ ತಾ ಪಂ ಅಧ್ಯಕ್ಷ ಹರೀಶ್ ಗಂಟೆ, ಸವಿತಾ ದೇವರಾಜ್, ಕಬುದೂರು ದೇವರಾಜ್, ತಿಮ್ಮಪ್ಪ ಹುರುಳಿ ಮತ್ತಿತರರು ಹಾಜರಿದ್ದರು.