Advertisement
ಇತ್ತೀಚೆಗೆ ಶಿವಮೊಗ್ಗ ಪ್ರವಾಸದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ರಾಜ್ಯ ಸರಕಾರ ಸಂಪುಟದಲ್ಲಿ ಅನುಮೋದಿಸಿದ್ದು, ಕೇಂದ್ರ ಸರಕಾರಕ್ಕೆ ಕಳುಹಿಸುವುದಾಗಿ ತಿಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪನವರು ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದೇಶದ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದವರ ಹೆಸರು ಇಡುವಂತೆ ಮನವಿ ಮಾಡಿ ದೊಡ್ಡತನ ಮೆರೆದಿದ್ದರು.
Related Articles
Advertisement
ಅಲ್ಲದೆ ವಿಮಾನ ನಿಲ್ದಾಣ ಇರುವುದು ಸೋಗಾನೆ ಎಂಬ ಗ್ರಾಮದಲ್ಲಿ. ಅದೇ ಹೆಸರನ್ನು ಇಟ್ಟರೆ ಭೂಮಿ ಕೊಟ್ಟ ರೈತರಿಗೆ ಗೌರವ ನೀಡಿದಂತಾಗುತ್ತದೆ ಎಂಬ ವಾದವೂ ಕೇಳಿಬಂದಿದೆ. ಜತೆಗೆ ಮಲೆನಾಡು ಏರ್‌ಪೋರ್ಟ್ ಹೆಸರಿಡಬೇಕೆಂಬ ಕೂಗು ಕೇಳಿಬಂದಿದೆ. ಬಿಎಸ್‌ವೈ ಅವರ ಹೆಸರಿಡಲು ನಿರ್ಧರಿಸುವ ಮೊದಲು ಅನೇಕ ಸಂಘಟನೆಗಳು ವಿವಿಧ ಹೆಸರುಗಳನ್ನು ಇಡಲು ಮನವಿ ಮಾಡಿದ್ದವು. ಬಿಎಸ್‌ವೈ ಹೆಸರಿಡಲೂ ಸಹ ಅಭಿಮಾನಿಗಳು ಮನವಿ ಮಾಡಿದ್ದರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅನೇಕರ ಕೊಡುಗೆ ಇದೆ. ದಿನೇ ದಿನೇ ಹೆಸರುಗಳ ಪಟ್ಟಿ ಬೆಳೆಯುತ್ತಲೇ ಇದೆ. ಯಾವ ಹೆಸರನ್ನು ಅಂತಿಮಗೊಳಿಸಿ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂಬುದೇ ಈಗ ಗೊಂದಲ ಮೂಡಿಸಿದೆ.
ಬಿಎಸ್‌ವೈ ಏರ್‌ಪೋರ್ಟ್ ರೂವಾರಿ
ಶಿವಮೊಗ್ಗಕ್ಕೆ ಏರ್‌ಪೋರ್ಟ್ ಕನಸು ನನಸು ಮಾಡಿದವರು ಬಿ.ಎಸ್. ಯಡಿಯೂರಪ್ಪ. 2009ರಲ್ಲಿ ಸಿಎಂ ಆದಾಗ ವಿಮಾನ ನಿಲ್ದಾಣಕ್ಕೆ ಪಿಪಿಪಿ ಮಾದರಿಯಲ್ಲಿ ಚಾಲನೆ ನೀಡಿದ್ದರು. ತಾಂತ್ರಿಕ ಕಾರಣಗಳಿಂದ ಅದು ಅಲ್ಲಿಗೆ ನಿಂತು ಹೋಯ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಅದರ ಬಗ್ಗೆ ಆಸಕ್ತಿ ತೋರಲಿಲ್ಲ. 2019 ರಲ್ಲಿ ಮತ್ತೆ ಸಿಎಂ ಆದ ಬಿಎಸ್‌ವೈ ಕಾಮಗಾರಿ ಪೂರ್ಣಗೊಳಿಸಲು ಆದೇಶ ನೀಡಿ ಅಗತ್ಯ ಅನುದಾನ ಬಿಡುಗಡೆ ಮಾಡಿದರು. 3200 ಮೀಟರ್ ರನ್‌ವೇ ಸಿದ್ಧವಾಗಿದ್ದು ಫಿನಿಶಿಂಗ್ ಹಂತದಲ್ಲಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಈ ವರ್ಷದ ಕೊನೆಗೆ ವಿಮಾನ ಹಾರುವುದು ಶತಸಿದ್ಧ. ಯಾರು ಏನೇ ಹೇಳಿದರೂ ಯಡಿಯೂರಪ್ಪನವರ ಹೆಸರೇ ಸೂಕ್ತ ಎನ್ನುತ್ತಿದೆ ಅಭಿಮಾನಿ ಪಡೆ.
ಮಲೆನಾಡು ಹಾಗೂ ಬಯಲುಸೀಮೆಗೆ ಹೊಂದಿಕೊಂಡಿರುವ ಶಿವಮೊಗ್ಗದಲ್ಲಿ ಏರ್‌ಪೋರ್ಟ್ ಸ್ಥಾಪನೆ ಅಷ್ಟು ಸುಲಭವಾಗಿರಲಿಲ್ಲ. 800 ಎಕರೆ ಭೂಮಿಯನ್ನು ಇದಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ನೂರಾರು ರೈತರು ಭೂಮಿ ಬಿಟ್ಟುಕೊಟ್ಟಿದ್ದಾರೆ. ಈಗಲೂ ಪೂರ್ಣ ಪ್ರಮಾಣದಲ್ಲಿ ಪರಿಹಾರ, ಭೂಸ್ವಾಧೀನ ಆಗಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಏರ್‌ಪೋರ್ಟ್ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು ಬಿಎಸ್‌ವೈ ಪರಿಶ್ರಮದಿಂದ ಎಂಬುದು ಸತ್ಯ. ಹೀಗಾಗಿ ಇವರ ಹೆಸರನ್ನೇ ಇಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಶರತ್ ಭದ್ರಾವತಿ