ಶಿವಮೊಗ್ಗ: ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಗಿದೆ. ವಿಚಾರಣೆ ನಡೆಸಿದಾಗ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿರುವುದನ್ನು ಬಾಯಿ ಬಿಟ್ಟಿದ್ದಾರೆ. ಪೊಲೀಸರ ಮುನ್ನೆಚ್ಚರಿಕೆಯಿಂದ ಶಿವಮೊಗ್ಗದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಅನಾಹುತ ತಪ್ಪಿಸಿದೆ.
ಏನಿದು ಪ್ರಕರಣ? :
ಶಿವಮೊಗ್ಗದ ಮೆಹಬೂಬ್ ನಗರದ ಸಲ್ಮಾನ್, ಅರ್ಬಾಜ್, ಉಸ್ಮಾನ್ ಬಂಧಿತರು. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು.
‘ಸಂಜೆಯೊಳಗೆ ಸಾಯಿಸುತ್ತೇವೆ’:
ಇತ್ತೀಚೆಗೆ ನ್ಯೂ ಮಂಡ್ಲಿ ಬಳಿ ಬೈಕ್’ನಲ್ಲಿ ತೆರಳುತ್ತಿದ್ದ ಹಿಂದೂ ಸಂಘಟನೆ ಕಾರ್ಯಕರ್ತನೊಬ್ಬನ ಸಹೋದರನನ್ನು ಆರೋಪಿಗಳು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳನ್ನು ತೋರಿಸಿ ನಿನ್ನ ಸಹೋದರ ಎಲ್ಲಿದ್ದಾನೆ? ಸಂಜೆಯೊಳಗೆ ಆತನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಅಲ್ಪ ಇಳಿಕೆ…ಭಾರತದಲ್ಲಿ 24ಗಂಟೆಯಲ್ಲಿ 2,483 ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಏರಿಕೆ
ಕಾರ್ಯಕರ್ತನ ಮೇಲೆ ನಿಗಾ ವಹಿಸಿದ್ದರು :
ಆರೋಪಿಗಳು ಹಿಂದೂ ಸಂಘಟನೆಯ ಕಾರ್ಯಕರ್ತನ ಚಲನವಲನದ ಮೇಲೆ ನಿಗಾ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಬೈಪಾಸ್ ರಸ್ತೆಯ ಸೇತುವೆ ಬಳಿ ಇವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.
ಹೆಚ್ಚಿನ ವಿಚಾರಣೆ ನಡೆಸಿದಾಗ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿರುವುದನ್ನು ಬಾಯಿ ಬಿಟ್ಟಿದ್ದಾರೆ. ಮೂವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.