ಶಿವಮೊಗ್ಗ: ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಸಂಸದ ಬಿ.ವೈ. ರಾಘವೇಂದ್ರ ಮಂಗಳವಾರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದರು. 76 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಹತ್ತಿರದ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಿಸಲು ಈಗಾಗಲೇ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ರಾಜ್ಯ ಸರ್ಕಾರ 43.14 ಎಕರೆ ಭೂಮಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕರಿಂದ ಖರೀದಿಸಿ ನೀಡಲಾಗುತ್ತಿದ್ದು, ರೈಲ್ವೆ ಇಲಾಖೆಯು ಈಗಾಗಲೇ ಯೋಜನೆಯ ಪ್ರಾಥಮಿಕ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಏಜೆನ್ಸಿಯನ್ನು ನಿಗದಿಪಡಿಸಿದೆ.
ಆದಷ್ಟು ಬೇಗನೇ ರೈಲ್ವೆ ಇಲಾಖೆಯ ವತಿಯಿಂದ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಬೇಕಾಗಿರುವ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವನ್ನು ಆದಷ್ಟು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಶಿವಮೊಗ್ಗ-ಶಿಕಾ ರಿಪುರ-ರಾಣಿಬೆನ್ನೂರು ಹೊಸ ರೈಲ್ವೆ ಮಾರ್ಗಕ್ಕೆ ಶೇ.50ರಷ್ಟು ಅನುದಾನವನ್ನು ನೀಡುತ್ತಿದ್ದು, ಈಗಾಗಲೇ ಅಗತ್ಯವಿರುವ 427 ಎಕರೆ ಭೂ ಸ್ವಾ ಧೀನ ಪೈಕಿ ಈಗಾಗಲೇ 378 ಎಕರೆ ಭೂಮಿಯನ್ನು ಸ್ವಾ ಧೀನಪಡಿಸಿಕೊಳ್ಳಲಾಗಿದ್ದು, ರೈಲ್ವೆ ಇಲಾಖೆಯಿಂದ ಆದಷ್ಟು ಬೇಗನೇ 2021-22ರ ಕೇಂದ್ರ ಆಯವ್ಯಯದಲ್ಲಿ ಘೋಷಿಸಿರುವಂತೆ 100 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸುವಂತೆ ಮನವಿ ಮಾಡಿದರು.
ಜಗತ್ಪಸಿದ್ದ ಜೋಗ ಜಲಪಾತಕ್ಕೆ ಗೇಟ್‌ವೇ ಎನಿಸಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜಂಬಗಾರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಯಾಗಬೇಕಿದ್ದು, ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಹೊಸ ರೈಲ್ವೆ ನಿಲ್ದಾಣ ಕಟ್ಟಡ ಹಾಗೂ 2ನೇ ಫ್ಲಾಟ್ ಫಾರಂ ಸೇರಿದಂತೆ ಇನ್ನಿತರೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಕೋರಿದರು. 2019ರಲ್ಲಿ ಶಿವಮೊಗ್ಗದಿಂದ ರೇಣಿಗುಂಟ ಮತ್ತು ಚೆನ್ನೆ çಗೆ ವಾರದಲ್ಲಿ ಎರಡು ದಿನಗಳ ಎರಡು ಹೊಸ ರೈಲುಗಳ ಓಡಾಟ ಪ್ರಾರಂಭಿಸಲಾಗಿತ್ತಾದರೂ, ಈ ರೈಲುಗಳ ಸಮಯವು ಸೂಕ್ತವಾಗಿರದ ಕಾರಣ, ಪ್ರಯಾಣಿಕರಿಗೆ ಅನುಕೂಲಕರ ವಾಗಿರುವುದಿಲ್ಲ.
ಆದ್ದರಿಂದ ಈ ಎರಡೂ ರೈಲುಗಳನ್ನು ಒಗ್ಗೂಡಿಸಿ ವಾರದಲ್ಲಿ ನಾಲ್ಕು ದಿನಗಳು ಶಿವಮೊಗ್ಗದಿಂದ ಚೆನ್ನೆ ಗೆ ರೇಣಿಗುಂಟ ಮಾರ್ಗವಾಗಿ ಚಲಿಸುವಂತೆ ಮಾಡಿದ್ದಲ್ಲಿ, ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬ ಅಂಶವನ್ನು ಸಭೆಯ ಗಮನಕ್ಕೆ ತಂದರು.
ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರಿನ ಮೂಕಾಂಬಿಕ ದೇವಸ್ಥಾನಕ್ಕೆ ಹೋಗುವವರಿಗೆ ಇಳಿಯಲು ಮುಕಾಂಬಿಕ ರೋಡ್ ಬೈಂದೂರು ರೈಲ್ವೆ ನಿಲ್ದಾಣವು ಹತ್ತಿರದ ಸ್ಟೇಷನ್ ಆಗಿದ್ದು, ಗರೀಬ್ ರಥ್ ಎಕ್ಸೆಸ್ ರೈಲಿಗೆ ಈ ನಿಲ್ದಾಣಕ್ಕೆ ನಿಲುಗಡೆಯನ್ನು ನೀಡಿದ್ದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಇಲ್ಲಿ ಇಳಿದು ಕೊಲ್ಲೂರಿಗೆ ತೆರಳಲು ಅತ್ಯಂತ ಉಪಯುಕ್ತ ಆಗುವುದನ್ನು ಸಭೆಯ ಗಮನಕ್ಕೆ ತರಲಾಯಿತು.
ಈ ಬಗ್ಗೆ ಆದಷ್ಟು ತ್ವರಿತವಾಗಿ ನಿಲುಗಡೆ ನೀಡುವ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ.