ಸಾಗರ: ಶರಾವತಿ ಹಿನ್ನೀರು ಹಾಗೂ ಅಂಬ್ಲಿಗೊಳ ಜಲಾಶಯದ ನೀರನ್ನು ಬಳಸಿ ಸಾಗರ ಹಾಗೂ ಹೊಸನಗರದ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆಯ ಕುರಿತು ಸದ್ಯದಲ್ಲಿಯೇ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಘೋಷಿಸಿದರು.
ತಾಲೂಕಿನ ಎಡಜಿಗಳೇಮನೆಯ ಇಕ್ಕೇರಿ ಪ್ರೌಢಶಾಲೆಯಲ್ಲಿ ಸೋಮವಾರ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ತಾವು ಚುನಾವಣೆಯಲ್ಲಿ ಸೋತ ಸಂದರ್ಭದಲ್ಲೂ ಶರಾವತಿ ಹಿನ್ನೀರಿನಿಂದ ಸಾಗರ ನಗರಕ್ಕೆ ನೀರು ತರುವ ಯೋಜನೆಗೆ ಸರ್ಕಾರದ ಒಪ್ಪಿಗೆ ಪಡೆಯಲು ಬಂದಾಗ, ಸಚಿವನಾಗಿದ್ದ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಯೋಜನೆ ಮಂಜೂರಾತಿಗೆ ಒತ್ತಡ ತಂದಿದ್ದೆ. ಕೂಲಿಂಗ್ ಗ್ಲಾಸ್, ಕಲರ್ ಡ್ರೆಸ್‌ನ ದೊಡ್ಡ ಜನ ನಾನೇ ಮಾಡಿದ್ದು ಎಂದು ಫೋಸ್ ಕೊಟ್ಟರು.
ಈಗಲೂ ಆವಿನಹಳ್ಳಿ, ಕಸಬಾಗೆ 320 ಕಿಮೀ ಪೈಪ್‌ಲೈನ್ ಹಾಕಿ ನೀರು ಒದಗಿಸುವ ಕೆಲಸ ಆಗುತ್ತದೆ. ಅತ್ತ ಅಂಬ್ಲಿಗೊಳ ಜಲಾಶಯದಿಂದ ಆನಂದಪುರ ಭಾಗಕ್ಕೂ ನೀರು ಸಿಗುತ್ತದೆ. ಮುಂದಿನ 15 ದಿನಗಳಲ್ಲಿ ಮಂಜೂರಾತಿ ಸಿಕ್ಕಾಗ ಅಧಿಕೃತವಾಗಿ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದರು. ಹೊಸನಗರ ಪಪಂ ವ್ಯಾಪ್ತಿಯಲ್ಲಿ 400 ದಿನಸಿ ಕಿಟ್ ವಿತರಿಸಿದರೆ ಹಾಲಪ್ಪ ಕಮಿಷನ್ ಹೊಡೆದಿದ್ದಾರೆ ಎಂದು ಬೊಬ್ಬೆ ಹೊಡೆದಿದ್ದು ಹಾಸ್ಯಾಸ್ಪದ ಎಂದರು. ಎಡಜಿಗಳೇಮನೆ ಗ್ರಾಪಂ ಉಪಾಧ್ಯಕ್ಷ ಗಿರೀಶ್ ಹಕ್ರೆ ಮಾತನಾಡಿ, ಶಾಸಕ ಹಾಲಪ್ಪ ಅವರು ಶಾಸಕರಾಗಿ ಆಯ್ಕೆಯಾಗಿ ಬಂದ ಮೇಲೆ ನಮ್ಮ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೆ ಸುಮಾರು 6 ಕೋಟಿ ರೂ. ಅನುದಾನ ನೀಡಿದ್ದಾರೆ. ಮಂಕಳಲೆಯಿಂದ ಬಾಳೆಗೆರೆವರೆಗೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಮಾಡಲು ಶಾಸಕರಿಗೆ ಮನವಿ ಸಲ್ಲಿಸಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕಿ ಶಿಲ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಾನಸ ಅಜಿತ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯ ನಿರ್ವಾಹಣಾ ಧಿಕಾರಿ ಪುಷ್ಪಾ ಎಂ. ಕಮ್ಮಾರ್, ನೀರಾವರಿ ಇಲಾಖೆಯ ಬಲರಾಮ್ ದುಭೆ, ಭರತ್, ಪ್ರಮುಖರಾದ ಎಸ್.ಟಿ. ರತ್ನಾಕರ್, ಲೋಕನಾಥ್ ಬಿಳಿಸಿರಿ, ದೇವೇಂದ್ರಪ್ಪ, ರಮೇಶ್ ಹಾರೆಗೊಪ್ಪ ಇನ್ನಿತರರು ಇದ್ದರು. ಅಮೂಲ್ಯ ಪ್ರಾರ್ಥಿಸಿದರು. ಸಚಿನ್ ಗೌಡ ಸ್ವಾಗತಿಸಿದರು. ಧರ್ಮಪ್ಪ ವಂದಿಸಿದರು. ಶ್ರೀಕಾಂತ್ ಎಸ್.ಜಿ. ನಿರೂಪಿಸಿದರು.