ಶಿವಮೊಗ್ಗ: ಇನ್ನೆರಡು ತಿಂಗಳಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ತಿಳಿಸಿದರು.
ಹೊಳೆಹೊನ್ನೂರು ಪಟ್ಟಣ ಹಾಗೂ ಹೊಳಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇರ್ ವೈದ್ಯಕೀಯ ಉಪಕರಣ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣದ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲಾಗುವುದು ಜೊತೆಗೆ ಕೇಂದ್ರಕ್ಕೆ ಬೇಕಾಗುವ ಸಲಕರಣೆ, ಎಕ್ಸರೇ ಹಾಗೂ ಸ್ಕಾÂನಿಂಗ್ ವಿಭಾಗವನ್ನು ತಕ್ಷಣದಲ್ಲೇ ಪ್ರಾರಂಭ ಮಾಡಲಾಗುವುದು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಎಲ್ಲಾ ವ್ಯವಸ್ಥೆ ಈ ಭಾಗದಲ್ಲಿ ಸಿಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ಸುಸಜ್ಜಿತ ಆರೋಗ್ಯ ಕೇಂದ್ರವಾಗಿ ನಿರ್ಮಾಣವಾಗುವುದರಲ್ಲಿ ಸಂದೇಹ ಬೇಡ ಎಂದರು.
ಗ್ರಾಮಾಂತರ ಕೇತ್ರದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ರೈತರು ಹೆಚ್ಚಾಗಿದ್ದು, ಅವರಿಗೆ ಸರಿಯಾದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ವೈದ್ಯರು ಶ್ರಮ ವಹಿಸಬೇಕಾಗಿದೆ.ತಜ್ಞರ ಪ್ರಕಾರ ಕೊರೊನಾ 3ನೇ ಅಲೆ ಎದುರಾಗಲಿದೆ ಎನ್ನಲಾಗುತ್ತಿದ್ದು, ಅದಕ್ಕೆ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದಲೇ ಎಲ್ಲಾ ರೀತಿಯಾಗಿ ಆರೋಗ್ಯ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ|ಅಶೋಕ್ ಮಾತನಾಡಿ ಸಮುದಾಯ ಆರೋಗ್ಯಕೇಂದ್ರ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ. ಶಾಸಕರ ಅನುದಾನದಲ್ಲಿ ಈಗಾಗಲೇ ಸುಮಾರು 4 ಕೊಠಡಿಗಳನ್ನು ಕೋವಿಡ್ ಸೆಂಟರ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಅಲ್ಲದೇ ಐಸಿಯೂ ಕೂಡ ಲಭ್ಯವಿದೆ ಎಂದರು.
ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಬ್ ಇನ್ಸ್ ಪೆಕ್ಟರ್ ಲಕ್ಷಿಪತಿ, ಡಾ| ದೇವಾನಂದ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟಾನಿ ಫನಾಂಡಿಸ್, ಬಿಜೆಪಿ ಮುಖಂಡರಾದ ಸಿದ್ದಪ್ಪ, ಸುಮ, ಶಾಂತಮ್ಮ, ಓಂಕಾರ್ ಮೂರ್ತಿ, ರವಿಕುಮಾರ್, ಹನುಮಂತ ಸೇರಿದಂತೆ ಸಮುದಾಯ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.