ಶಿಕಾರಿಪುರ: ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಾಖಲೆ ನಿರ್ಮಿಸುವ ಜತೆಗೆ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತಾಲೂಕಿನ ಅಂಜನಾಪುರ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಅಂಜನಾಪುರ ಜಲಾಶಯ ಒಡೆದ ಸಂದರ್ಭದಲ್ಲಿ ಬಿಎಸ್‌ವೈ ಕಣ್ಣೀರು ಹಾಕಿದ್ದಲ್ಲದೆ ಸುಮ್ಮನೆ ಕೂರದೆ ಕೂಡಲೇ ಕಾರ್ಯಪ್ರವೃತ್ತರಾಗಿ ಹರಿಯುವ ನೀರು ನಿಲ್ಲಿಸುವುದಕ್ಕೆ ಶ್ರಮದಾನ ಆಯೋಜಿಸಿ ತಾತ್ಕಾಲಿಕ ಒಡ್ಡು ನಿರ್ಮಿಸಿ ರೈತರ ಭತ್ತಕ್ಕೆ ನೀರು ಒದಗಿಸುವಲ್ಲಿ ಯಶಸ್ವಿಯಾದರು.
ಜಲಾಶಯ ತುಂಬಿದಾಗ ಗೇಟ್ ತಾನಾಗಿಯೇ ತೆಗೆಯುವ ತಂತ್ರಜ್ಞಾನದ ಗೋಡ್‌ಬೋಲೆ ಗೇಟ್ ನಿರ್ಮಿಸಿ ಹೊಸ ತಂತ್ರಜ್ಞಾನವನ್ನು ತಾಲೂಕಿನ ಜನರಿಗೆ ಪರಿಚಯಿಸಿದರು. ಇದೀಗ ತಾಲೂಕಿನ ಎಲ್ಲಾ ಕೆರೆ ತುಂಬಿಸುವುದಕ್ಕಾಗಿ ಮೂರು ಯೋಜನೆ ರೂಪಿಸಿದ್ದು ಅವುಗಳೆಲ್ಲವೂ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾರೇಗೊಪ್ಪ ಸುತ್ತಲಿನ ಗ್ರಾಮಗಳ ಕುಡಿಯುವ ನೀರಿಗಾಗಿ ಮತ್ತೂಂದು ಏತ ನೀರಾವರಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ತಾಲೂಕಿನ 6500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಅಂಜನಾಪುರ ಜಲಾಶಯದಿಂದ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಅಂಜನಾಪುರ ಜಲಾಶಯಕ್ಕೆ ತುಂಗಾ ನದಿಯಿಂದ ನೀರು ತರುವ ಹೊಸಳ್ಳಿ ಏತ ನೀರಾವರಿ ಕಾಮಗಾರಿ ಭರದಿಂದ ಸಾಗಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ತಾಲೂಕಿನ ಜನರಿಗೆ ಚುನಾವಣೆಯಲ್ಲಿ ಹೆಂಡ, ಹಣ ಹಂಚಿ ರಾಜಕೀಯ ಮಾಡುವುದಕ್ಕಿಂತಲೂ ಜನತೆ ನಿರಂತರವಾಗಿ ನೀರು ನೀಡುವ ಕೆಲಸ ಮಾಡಿರುವ ಬಿಎಸ್‌ವೈ ಅಭಿನಂದನಾರ್ಹರು.
ತಾಲೂಕಿನಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಆಗಿದ್ದರೂ ಟೀಕೆ ಮಾಡುವವರೂ ಇದ್ದಾರೆ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು. ಸಂಸದರ ಪತ್ನಿ ತೇಜಸ್ವಿನಿ, ಅಪರ್ಣ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ. ರೇವಣಪ್ಪ, ತಾಪಂ ಅಧ್ಯಕ್ಷ ಸುರೇಶ್ ನಾಯ್ಕ, ನೀರಾವರಿ ಇಲಾಖೆ ಅ ಧಿಕಾರಿ ಯತೀಶ್‌ಚಂದ್ರ, ಮುಖಂಡರಾದ ಚುರ್ಚಿಗುಂಡಿ ಶಶಿಧರ, ಟಿ.ಎಸ್. ಮೋಹನ್, ನಿವೇದಿತಾ, ಕೆ. ಹಾಲಪ್ಪ, ಸುಕೇಂದ್ರಪ್ಪ ಮತ್ತಿತರರು ಇದ್ದರು.