ಸೊರಬ: ಖಾಸಗಿ ಶಾಲೆಗಳಲ್ಲಿ ಪೋಷಕರಿಂದ ಒತ್ತಾಯಪೂರ್ವಕವಾಗಿ ಶುಲ್ಕ ಸಂಗ್ರಹಿಸುತ್ತಿರುವ ಕುರಿತು ಗಂಭೀರ ಚರ್ಚೆಯಾದ ಘಟನೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.
ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಮಾತನಾಡಿ, ಸರ್ಕಾರದಿಂದ ಇನ್ನೂ ಸಹ ಖಾಸಗಿ ಶಾಲೆಗಳಿಂದ ಶುಲ್ಕ ಸಂಗ್ರಹಿಸುವ ಕುರಿತು ನಿರ್ಣಯ ಕೈಗೊಂಡಿಲ್ಲ ಹಾಗೂ ಶುಲ್ಕದ ಕುರಿತು ನಿಗದಿಪಡಿಸಿಲ್ಲ.
ಆದರೂ, ತಾಲೂಕಿನಲ್ಲಿ ಕೆಲ ಖಾಸಗಿ ಶಾಲೆಗಳಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಸಹ ಈಗಾಗಲೇ ಒತ್ತಾಯಪೂರ್ವಕವಾಗಿ ಕಳೆದ ಶೈಕ್ಷಣಿಕ ಸಾಲಿನ ಬಾಕಿ ಇರುವ ಶುಲ್ಕದ ಜೊತೆಗೆ ಪ್ರಸಕ್ತ ಸಾಲಿನ ಶುಲ್ಕವನ್ನು ವಸೂಲಿ ಮಾಡುತ್ತಿರುವ ಕುರಿತು ಪೋಷಕರು ಆರೋಪಿಸುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ ಎಂದು ಬಿಇಒ ನಂಜರಾಜ್ ಅವರನ್ನು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಬಿಇಒ, ಈ ಕುರಿತು ಯಾವುದೇ ಪೋಷಕರು ತಮ್ಮ ಬಳಿ ಆರೋಪವನ್ನು ಮಾಡಿಲ್ಲ. ಕೂಡಲೇ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ, ಶುಲ್ಕ ವಸೂಲಿ ಕುರಿತು ಪರಿಶೀಲನೆ ನಡೆಸಲಾಗುವುದು. ಸರ್ಕಾರ ಸಹ ಕೊರೊನಾ ಸಂಕಷ್ಟದಲ್ಲಿ ಒತ್ತಾಯಪೂರ್ವಕವಾಗಿ ಶುಲ್ಕ ಸಂಗ್ರಹಿಸುವುದಕ್ಕೆ ತಡೆ ನೀಡಿದೆ. ಖಾಸಗಿ ಶಾಲೆಗಳಲ್ಲಿ ಒತ್ತಾಯದಿಂದ ಶುಲ್ಕ ಸಂಗ್ರಹಿಸುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ತಾಲೂಕು ಆರೋಗ್ಯಾ ಧಿಕಾರಿ ಡಾ| ಅಕ್ಷತಾ ವಿ. ಖಾನಾಪುರ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಇಳಿಮುಖವಾಗಿದ್ದು, ಈವರೆಗೂ 4419 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, 66 ಸಕ್ರಿಯ ಪ್ರಕರಣಗಳು ಚಾಲ್ತಿಯಲ್ಲಿವೆ. ಜೊತೆಗೆ 164 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈಗಾಗಲೇ ಮುಂಚೂಣಿ ಕಾರ್ಯಕರ್ತರು ಮತ್ತು 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನವರಿಗೆ ಲಸಿಕೆ ನೀಡಲಾಗಿದೆ.
ಮುಂದುವರಿದು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಲಸಿಕೆ ದಾಸ್ತಾನು ಬಂದ ಬಳಿಕ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯ ಮಾಡಲಾಗುವುದು ಎನ್ನುತ್ತಿದ್ದಂತೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಒಡೆಯರ್ ಮಾತನಾಡಿ, ನೆರೆಯ ತಾಲೂಕಿನಲ್ಲಿ ಅಥವಾ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೌಲಭ್ಯಗಳನ್ನು ತಲುಪಿಸುವ ಕುರಿತು ಪ್ರಶ್ನಿಸಿದರು.
ತಾಪಂ ಇಒ ಕೆ.ಜಿ. ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿದ್ದು, ವಾಡಿಕೆ ಮಳೆಗಿಂತ ಶೇ. 58 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಎಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ರೇಷ್ಮೆ ಇಲಾಖೆಯ ಎನ್.ಡಿ. ನಾಯಕ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅ ಧಿಕಾರಿಗಳು ಇದ್ದರು.