Advertisement

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

11:03 PM Jun 18, 2021 | Shreeraj Acharya |

ಶಿವಮೊಗ್ಗ: 2020-21ನೇ ಶೈಕ್ಷಣಿಕ ಸಾಲಿನಿಂದ ಪೂರ್ವಾನುಮತಿ ಇಲ್ಲದೆಯೇ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್‌ ಕೋರ್ಸ್‌ಗಳನ್ನು ಪ್ರಾರಂಭಿಸಲು ಕುವೆಂಪು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅನುಮತಿ ದೊರಕಿದ್ದು, ಈ ಭಾಗದ ಉನ್ನತ ಶಿಕ್ಷಣಾರ್ಥಿಗಳಿಗೆ ವರವಾಗಿ ಪರಿಣಮಿಸಲಿದೆ.

Advertisement

ಈ ಬಗ್ಗೆ ಆದೇಶ ಹೊರಡಿಸಿರುವ ಯುಜಿಸಿ, ದೇಶಾದ್ಯಂತ 38 ವಿವಿಗಳಿಗೆ ಆನ್‌ಲೈನ್‌ ಮಾದರಿಯಲ್ಲಿ ಕೋರ್ಸುಗಳನ್ನು ಪ್ರಾರಂಭಿಸಲು ಅವಕಾಶ ನೀಡಿದೆ. ದೇಶದ 38 ವಿಶ್ವವಿದ್ಯಾಲಯಗಳು ಇನ್ನು ಮುಂದೆ ಆನ್‌ಲೈನ್‌ ಮೂಲಕ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಬಹುದು. ಇದರಲ್ಲಿ ಕುವೆಂಪು ವಿವಿ ಕೂಡ ಸೇರಿದ್ದು ವಿಶ್ವವಿದ್ಯಾಲಯದಲ್ಲಿ ಹರ್ಷ ಮೂಡಿಸಿದೆ.

ಕರ್ನಾಟಕದಲ್ಲಿ ಕುವೆಂಪು ವಿವಿ ಜೊತೆಗೆ ಜೈನ್‌, ಯೆನೋಪಾಯ ಮತ್ತು ಮೈಸೂರು ವಿವಿಗಳಿಗೆ ಕೂಡ ಅನುಮತಿ ಸಿಕ್ಕಿದೆ. ಮೈಸೂರು ವಿಶ್ವವಿದ್ಯಾಲಯಕ್ಕೆ ವಾಣಿಜ್ಯ ಕೋರ್ಸುಗಳನ್ನು ಮಾತ್ರ ನಡೆಸಲು ಅನುಮತಿ ದೊರಕಿದ್ದು, ಯೆನೋಪಾಯ ವಿವಿಯು ಬಿಕಾಂ ಪದವಿ ಮಾತ್ರ ಪ್ರಾರಂಭಿಸಬಹುದು. ಆದರೆ ಕುವೆಂಪು ವಿವಿಯು ಬಿಬಿಎಂ, ಬಿ.ಕಾಂ ಮತ್ತು ಬಿಎ ಸ್ನಾತಕ ಕೋರ್ಸ್‌ಗಳ ಜೊತೆಗೆ ಎಂಬಿಎ, ಎಂಕಾಂ, ಮತ್ತು ಸಮಾಜಶಾಸ್ತ, ರಾಜಕೀಯ ಶಾಸ್ತ, ಇತಿಹಾಸ, ಅರ್ಥಶಾಸ್ತ, ಇಂಗ್ಲಿಷ್‌ ಮತ್ತು ಕನ್ನಡ ವಿಷಯಗಳಲ್ಲಿ ಎಂಎ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ಪಡೆದಿದೆ.

2020-21ನೇ ಸಾಲಿನಿಂದ ಈ ಎಲ್ಲ ಕೋರ್ಸುಗಳನ್ನು ಪ್ರಾರಂಭಿಸಲು ಪ್ರತ್ಯೇಕ ಅನುಮತಿ ಪಡೆಯಬೇಕಿಲ್ಲ ಎಂದು ಯುಜಿಸಿ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಕುವೆಂಪು ವಿವಿ ನ್ಯಾಕ್‌ನಿಂದ “ಎ’ ಶ್ರೇಣಿ ಪಡೆದಿದ್ದು, ಕೇಂದ್ರ ಸರ್ಕಾರದ ಎಆರ್‌ಎಫ್‌ ನಲ್ಲಿ 73ನೇ ರ್‍ಯಾಂಕ್‌ ಪಡೆದಿದೆ. ಇನ್ನು ಇತ್ತೀಚೆಗೆ ತಾನೆ ಬಿಡುಗಡೆಯಾದ ಸೈಮಾಗೋ ರ್‍ಯಾಂಕಿಂಗ್‌ನಲ್ಲಿ 56ನೇ ಸ್ಥಾನ ಪಡೆದು ದೇಶದ ಮಂಚೂಣಿಯ ಉನ್ನತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತಿದೆ.

ಈಗಾಗಲೇ ವಿಶ್ವವಿದ್ಯಾಲಯವು ಆನ್‌ಲೈನ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ವಿಶ್ವವಿದ್ಯಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next