Advertisement

ಜನರ ಮನದಲ್ಲಿ ಚಿರಸ್ಥಾಯಿಯಾದ ಶಿವಳ್ಳಿ

11:50 AM Mar 20, 2022 | Team Udayavani |

ಕುಂದಗೋಳ: ಹಳ್ಳಿ-ಹಳ್ಳಿ, ಓಣಿ-ಓಣಿಗಳನ್ನು ತಿರುಗಿ, ಜನರ ವಿಶ್ವಾಸ ಗಳಿಸಿ, ಮೂರು ಬಾರಿ ಶಾಸಕರಾಗಿ, ಸಚಿವರಾಗಿದ್ದ ದಿ| ಸಿ.ಎಸ್‌.ಶಿವಳ್ಳಿ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದಾರೆ. ಚಿರಸ್ಥಾಯಿಯಾಗಿದ್ದಾರೆ.

Advertisement

ಶಿವಳ್ಳಿಯವರ ಮೂರನೇ ವರ್ಷದ ಪುಣ್ಯತಿಥಿ ಅಂಗವಾಗಿ ಅವರ ಜನ್ಮಸ್ಥಳ ಯರಗುಪ್ಪಿಯಲ್ಲಿ ಮಾ.20ರಂದು ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ರಾಜಕೀಯ ಮುಖಂಡರು ಪುತ್ಥಳಿ ಅನಾವರಣಗೊಳಿಸಲಿದ್ದಾರೆ.

ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದಲ್ಲಿ ಸತ್ಯಪ್ಪ ಹಾಗೂ ಗಂಗಮ್ಮ ದಂಪತಿಯ ದ್ವಿತೀಯ ಮಗನಾಗಿ 12-11-1956ರಂದು ಜನಿಸಿದ ಅವರು ಬಿಕಾಂ ಪದವಿ ಪಡೆದರು. ನಂತರ ರಾಜಕೀಯಕ್ಕೆ ಧುಮುಕಿದರು. ಯರಗುಪ್ಪಿ ಗ್ರಾಪಂಗೆ 1985ರಲ್ಲಿ ಸ್ಪರ್ಧಿಸಿ ಪರಾಜಿತನಾದಾಗ ತಂದೆ ದಿ| ಸತ್ಯಪ್ಪ ಅವರು ಶಾಸಕನಾಗಿ ಮನೆಗೆ ಬಾ ಎಂದು ಹರಸಿದರು. ಮನೆ ಬಿಟ್ಟು ಹೋದ ಶಿವಳ್ಳಿ ಅವರು ಸುಮ್ಮನೆ ಕೂಡದೆ, ಸೋಲೇ ಗೆಲುವಿನ ಮೆಟ್ಟಿಲೆಂದು ತಿಳಿದು 1953ರಲ್ಲಿ ದಿ| ಎಸ್‌.ಬಂಗಾರಪ್ಪನವರ ಕ್ರಾಂತಿರಂಗ ಪಕ್ಷದಿಂದ ಕುಂದಗೋಳ ಮತಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪ ರ್ಧಿಸಿ ಪರಾಭವಗೊಂಡರು. ಆದರೂ ಎದೆಗುಂದದೆ ರಾಜಕುಮಾರ ಅಭಿಮಾನಿ ಬಳಗ ಕಟ್ಟಿಕೊಂಡು ಕುಂದಗೋಳದಲ್ಲಿ ಸಣ್ಣದೊಂದು ಕೊಠಡಿಯಲ್ಲಿ ನೆಲೆಸಿ, ಬಡಜನರ ಸೇವೆಗೆ ನಿಂತರು.

ಇಡೀ ತಾಲೂಕು ತಿರುಗಿ ಜನರನ್ನು ಸಂಘಟಿಸಿದರು. ಚಾಪೆ, ಪೇಪರ್‌ ಮೇಲೆ ಮಲಗಿ ತನ್ನ ರಾಜಕೀಯ ಭವಿಷ್ಯ ಗಟ್ಟಿಯಾಗಿಸಿಕೊಳ್ಳುತ್ತ ಸಾಗಿ, 1994ರಲ್ಲಿ ಬಂಗಾರಪ್ಪ ಅವರ ಅಭಿಮಾನಿಯಾಗಿ, ಅವರ ಗರಡಿಯಲ್ಲಿ ಬೆಳೆದು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಮೂಲಕ ಸ್ಪರ್ಧಿಸಿ ಸೋತರು.

Advertisement

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಜನತೆಯೇ ತಮ್ಮ ಜೇಬಿನಿಂದ ಹಣ ಹಾಕಿ ಮೊದಲ ಬಾರಿಗೆ ವಿಧಾನಸಭೆಗೆ ಕಳುಹಿಸಿದರು. ನಂತರ ಕಾಂಗ್ರೆಸ್‌ ಸೇರಿದರು. 2006ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಪಕ್ಷೇತರನಾಗಿ ಸ್ಪರ್ಧಿಸಿ ಮತ್ತೆ ಪರಾಭವಗೊಂಡರು. 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. 2018ರಲ್ಲಿ ಕಾಂಗ್ರೆಸ್‌ ಮೂಲಕ ಸ್ಪರ್ಧಿಸಿ ಮೂರನೇ ಬಾರಿ ಗೆಲ್ಲಲಾಗದೆಂಬ ಮಾತು ಸುಳ್ಳು ಮಾಡಿ ಗೆದ್ದು ಬಂದರು. ನಂತರ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಪೌರಾಡಳಿತ ಸಚಿವರಾದರೂ ಅವಧಿ ಪೂರ್ಣಗೊಳಿಸದೆ ವಿಧಿಯಾಟ ಅವರ ಜೀವವನ್ನೇ ಕಿತ್ತುಕೊಂಡಿತು. ಈಗ ಅವರ ಪತ್ನಿ ಕುಸುಮಾವತಿ ಶಿವಳ್ಳಿಯವರು ಶಾಸಕಿಯಾಗಿ ಪತಿಯ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

-ಶೀತಲ ಎಸ್‌.ಎಂ.

Advertisement

Udayavani is now on Telegram. Click here to join our channel and stay updated with the latest news.

Next