ತುಮಕೂರು:ಕಾಯಕಯೋಗಿ, ಸಾಮಾಜಿಕ ನ್ಯಾಯದ ಹರಿಹಾರ, ತ್ರಿವಿಧ ದಾಸೋಹಿ, ಶೈಕ್ಷಣಿಕ ಜ್ಯೋತಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ(111ವರ್ಷ) ಲಿಂಗಶರೀರದ ಅಂತಿಮ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬರತೊಡಗಿದೆ. ಸಿದ್ದಗಂಗಾ ಮಠದತ್ತ ಅಪಾರ ಜನಸ್ತೋಮ ಹರಿದು ಬರುತ್ತಿದ್ದ ಹಿನ್ನೆಲೆಯಲ್ಲಿ ಸಂಜೆ 6ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಬೆಂಗಳೂರಿನಿಂದ ವಿಶೇಷ ರೈಲುಗಳಲ್ಲಿ, ತುಮಕೂರಿನ ಹಾಗೂ ಸುತ್ತಮುತ್ತ ಹಳ್ಳಿಗಳಿಂದ ಜನರು ಬಸ್ ಗಳಲ್ಲಿ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ತುಮಕೂರಿನ ಹೊರವಲಯದಲ್ಲಿಯೇ ವಾಹನಗಳಿಗೆ ತಡೆಯೊಡ್ಡಲಾಗುತ್ತಿದ್ದು, ಅಲ್ಲಿಂದ ಜನ ಮಠದತ್ತ ಆಗಮಿಸುತ್ತಿದ್ದಾರೆ.
ಅಂತಿಮ ದರ್ಶನ ಪಡೆಯಲು ಐದು ಕಿಲೋ ಮೀಟರ್ ಗಿಂತಲೂ ಹೆಚ್ಚು ಉದ್ದದ ಭಕ್ತರ ಸಾಲು ಕಂಡು ಬಂದಿದೆ. ತುಮಕೂರಿನ ಹೈವೇಯ ಇಕ್ಕೆಲಗಳಲ್ಲಿಯೂ 60ಕ್ಕೂ ಹೆಚ್ಚು ಕಡೆ ಅನ್ನ ದಾಸೋಹ ನಡೆಸಲಾಗುತ್ತಿದೆ. ಬೆಳಗ್ಗೆ ಕೂಡಾ ಯಾವುದೇ ಭಕ್ತರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಉಪ್ಪಿಟ್ಟು, ಕೇಸರಿಬಾತ್, ಅನ್ನಸಾಂಬಾರ್, ರೈಸ್ ಬಾತ್ ವ್ಯವಸ್ಥೆ ಬೆಳಗ್ಗೆ ಭಕ್ತರಿಗೆ ಮಾಡಿಕೊಡಲಾಗಿತ್ತು. ತುಮಕೂರಿನಾದ್ಯಂತ ಅಂಗಡಿ, ಮುಂಗಟ್ಟು ಮುಚ್ಚಿದ್ದು ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.