ಬಾಗೇಪಲ್ಲಿ: ಸರ್ವಜ್ಞ ಕವಿ ತಮ್ಮ ಲೇಖನಿಯಿಂದ ತ್ರಿಪದಿಗಳ ಮೂಲಕ ಲೋಕದ ಡೊಂಕುಗಳನ್ನು ತಿದ್ದಿದರು. ಹಾಗೆಯೇ ûಾತ್ರ ತೇಜಸ್ಸಿನ ಸಾಕಾರ ಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರು ಸನಾತನ ಹಿಂದೂ ರಾಜ್ಯ, ಸಂಸ್ಕೃತಿ ಹಾಗೂ ಧರ್ಮದ ಉಳಿವು ಮತ್ತು ಏಳಿಗೆಗೆ ಖಡ್ಗ ಬಲದಿಂದ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆಂದು ತಹಶೀಲ್ದಾರ್ ಆರ್. ಶೂಲದಯ್ಯ ಪ್ರತಿಪಾದಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಛತ್ರಪತಿ ಶಿವಾಜಿ ಹಾಗೂ ಸರ್ವಜ್ಞರ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದಿನೇಳನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಏಳಿಗೆಗೆ ಬಂದ ಮರಾಠರು ಭಾರತದ ಇತಿಹಾಸದಲ್ಲಿ ಒಂದು ಅಪೂರ್ವ ಅಧ್ಯಾಯವನ್ನೇ ಬರೆದರು. ವಿಜಯನಗರ ಪತನಾ ನಂತರ ಮರಾಠರು ಶಿವಾಜಿಯ ನಾಯಕತ್ವದಲ್ಲಿ ಏಳಿಗೆ ಹೊಂದಲು ಅನೇಕ ಅಂಶಗಳು ಪ್ರೇರಕವಾದವು. ಶಿವಾಜಿ ಒಬ್ಬ ಆದರ್ಶ ಪುರುಷ, ಸರ್ವಧರ್ಮ ಸಹಿಷ್ಣುವಾಗಿದ್ದ. ಉತ್ತಮ ಆಡಳಿತಗಾರ, ಸಂಘಟನಾ ಚತುರ, ಅಸಾಧಾರಣ ಸೇನಾನಿ.
ಅನ್ಯಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ನೋಡಿದ ಉದಾರವಾದಿ. ಮಧ್ಯ ಯುಗದಲ್ಲಿ ಭಾರತವನ್ನು ಆಳಿ ಅಳಿದುಹೋದ ರಾಜ ಮಹಾರಾಜರಲ್ಲಿ ಕೊನೆಯ ಕ್ರಿಯಾಶೀಲ ವ್ಯಕ್ತಿ ಶಿವಾಜಿ. ಹಾಗಾಗಿ ಶಿವಾಜಿಯ ದಿಗ್ವಿಜಯಗಳು ಖಡ್ಗ ಕಾವ್ಯಗಳಾದರೆ, ಸರ್ವಜ್ಞನ ಲೇಖನಿಯಿಂದ ಹರಿದುಬಂದ ತ್ರಿಪದಿಗಳು ಲೋಕದಲ್ಲಿ ಅನುಭವವಾಗುವ ಸಾರಾಂಶ ಸಾಹಿತ್ಯ ಎಂದರು.
ಸರ್ವಜ್ಞನು ಎಲ್ಲಾ ಕ್ಷೇತ್ರದಲ್ಲಿನ ಬಗ್ಗೆ ತಮ್ಮ ಅನುಭವವನ್ನು ಪ್ರತಿಪಾದಿಸಿದ್ದಾನೆ. ರವಿ ಕಾಣದ್ದನ್ನು ಕವಿ ಕಂಡ ಅನ್ನುವ ಹಾಗೆ, ಸರ್ವಜ್ಞನು ಸಮಾಜದ ಅನುಭವದ ಸಾರವನ್ನು ತಮ್ಮ ತ್ರಿಪದಿಗಳ ಮುಖಾಂತರ ತಮಗೆ ನೀಡಿ ಇಡೀ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಲವನ್ನು ಕೊಂಬಾಗ ಹಾಲು ಹಣ್ಣುಂಡಂತೆ, ಸಾಲಿಗನು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ಎನ್ನುವ ತ್ರಿಪದಿ, ಸಾಲದ ಬಗ್ಗೆ ಎಚ್ಚರವಿರಬೇಕು ಎನ್ನುವುದು ಇಂದಿನ ಸಮಾಜಕ್ಕೂ ಅನ್ವಯಿಸುತ್ತದೆ. ಹಾಗಾಗಿ ಸರ್ವಜ್ಞನ ಸಾಹಿತ್ಯ ಸರ್ವಕಾಲಿಕ ಎಂದರು.
ರಾಜ್ಯ ವಿಸ್ತರಿಸಿ ಛತ್ರಪತಿ ಎನ್ನಿಸಿಕೊಂಡ ಶಿವಾಜಿ ದೇಶವನ್ನು ಸಂಘಟನೆ ಮಾಡಿ, ಉದಾರವಾಗಿ ರಾಜ್ಯಭಾರ ಮಾಡಿದರು. ಸ್ವರ್ವಜ್ಞ ಕವಿ ಸಾಹಿತ್ಯದ ಮುಖಾಂತರ ಸಮಾಜದ ಅನುಭವಗಳನ್ನು ಒತ್ತಿ ಹೇಳಿದರು. ತ್ರಿಪದಿ ಬ್ರಹ್ಮನೆಂದೇ ಖ್ಯಾತಿ ಪಡೆದರು ಎಂದು ಶ್ಲಾಘಿಸಿದರು.
ಎಂ.ಎನ್. ಮಂಜುನಾಥ್ ಮಾತನಾಡಿದರು. ಬಿಇಒ ವಿ.ಆದಿಲಕ್ಷ್ಮಮ್ಮ ಸ್ವಾಗತಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಶಂಕರಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಉಷಾರಾಣಿ, ತಾಪಂ ಉಪಾಧ್ಯಕ್ಷೆ ಸರಸ್ವತಮ್ಮ, ಸದಸ್ಯರು, ಅಧಿಕಾರಿಗಳು, ಮರಾಠರ ಸಂಘದ ಅಧ್ಯಕ್ಷ ಆನಂದರಾವ್, ಗೌರವಧ್ಯಕ್ಷ ಪಾಂಡುರಂಗರಾವ್, ಪದಾಧಿಕಾರಿಗಳು, ಕುಂಬಾರ ಸಂಘದ ಪದಾಧಿಕಾರಿಗಳು, ಸಮುದಾಯಗಳ ಹಿರಿಯರು ಇದ್ದರು.