ಅಳ್ನಾವರ: ಹುಲಿಕೇರಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮ ಸೋಮವಾರ ಜರುಗಿತು
ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಗೋಸಾವಿ ಮಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ ಮಾತನಾಡಿ, ಸಮಾಜ ಮತ್ತು ನಾಡಿನ ಪ್ರಗತಿಗೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರ. ಆತನಲ್ಲಿದ್ದ ವ್ಯಕ್ತಿತ್ವವೇ ಅವನನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಲು ಸ್ಫೂರ್ತಿಯಾಗಿತ್ತು. ಅಂತಹ ಮಹಾನ್ ವ್ಯಕ್ತಿಯ ಜೀವನವನ್ನು ನಾವು ಮಾದರಿಯಾಗಿಸಿಕೊಂಡಾಗ ನಾಡಿನಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯವಾಗಲಿದೆ ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ನಾವಿಂದು ನಾಡಿನಲ್ಲಿ ತಲೆ ಎತ್ತಿ ಓಡಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರೆ ಅದು ಛತ್ರಪತಿ ಶಿವಾಜಿಯ ಹೋರಾಟದಿಂದ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅಪ್ರತಿಮ ದೇಶಭಕ್ತನಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ ನಾಡಿನ ರಕ್ಷಣೆಯ ಜೊತೆಗೆ ಹಿಂದೂ ಸಮಾಜವನ್ನು ರಕ್ಷಿಸುವ ಕೆಲಸ ಮಾಡಿದ್ದು ನಮಗೆಲ್ಲ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಸಂಘಟನೆಯ ಸಾಮರ್ಥ್ಯ ಬೆಳೆಸಿಕೊಳ್ಳಲು ಶಿವಾಜಿ ಮಹಾರಾಜ ಸ್ಫೂತಿದಾಯಕನಾಗಿದ್ದು ಹಬ್ಬದ ವಾತಾವರಣದಲ್ಲಿ ಶಿವಾಜಿ ಪುತ್ಥಳಿ ಅನಾವರಣ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕ್ಷತ್ರೀಯ ಸಮಾಜದ ಮುಖಂಡರಾದ ಉದಯಸಿಂಗ್, ಕೇಶವ ಯಾದವ, ಸುಭಾಸ ಧರ್ಮಾಯಿ, ಲಕ್ಷ್ಮಣ ಗಂಡಗಾಳಕರ, ನ್ಯಾಯವಾದಿ ಚಂದ್ರಶೇಖರ ಅಂಬೋಜಿ, ಗ್ರಾಪಂ ಅಧ್ಯಕ್ಷ ದಸ್ತಗೀರ ಹುಣಸಿಕಟ್ಟಿ, ಮುರಗೇಶ ಇನಾಮದಾರ, ಲಕ್ಷ್ಮೀ ಕಿತ್ತೂರ, ಗುರುರಾಜ ನರಗುಂದ, ರೋಹಿಣಿ ಡೊಳ್ಳಿನ, ಬಸವರಾಜ ಇನಾಮದಾರ, ಶಂಬು ಆರೇರ ಮತ್ತಿತರರಿದ್ದರು
ಯುವಕ ಮಂಡಳದ ರವಿ ಮೀಟಗಾರ, ಮಂಜುನಾಥ ಬೇಕ್ವಾಡಕರ, ನಾರಾಯಣ ಜಿನ್ನಪ್ಪಗೋಳ, ಅಂಬರೀಶ ಕಡಬಗಟ್ಟಿ, ವಿಷ್ಣು ಕೇದಾರ್ಜಿ, ಸುರೇಶ ಜಿನ್ನಪ್ಪಗೋಳ ಹಾಜರಿದ್ದರು. ಶಿವಾಜಿ ಡೊಳ್ಳಿನ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬೆಳಗಾವಿ ಸ್ವಾಗತಿಸಿದರು. ಸುರೇಶ ಪಾಟೀಲ ನಿರೂಪಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಸ್ವಾಮೀಜಿ ಮತ್ತು ಗಣ್ಯರನ್ನು ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆದೊಯ್ಯಲಾಯಿತು.