ವಾಡಿ: ಇಷ್ಟು ವರ್ಷಗಳ ಕಾಲ ಸಂದಿ ಗಲ್ಲಿಯಲ್ಲಿದ್ದ ಕಾಶಿ ವಿಶ್ವನಾಥನ ಸನ್ನಿಧಿಯೀಗ ವಿಶ್ವ ಪ್ರಸಿದ್ಧ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕೇವಲ ೩೦೦೦ ಚದರ ಅಡಿಯಲ್ಲಿದ್ದ ದೇವಸ್ಥಾನ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆಸಕ್ತಿಯಿಂದಾಗಿ ಸದ್ಯ 5 ಲಕ್ಷ ಚದರ ಅಡಿಯಲ್ಲಿ ಈ ಪವಿತ್ರ ಪುಣ್ಯಕ್ಷೇತ್ರ ವಿಸ್ತಾರಗೊಂಡಿದೆ ಎಂದು ಕಾಶಿ ಜ್ಞಾನ ಸಿಂಹಾಸನಾದೀಶ್ವರ ಶ್ರೀಶ್ರೀ ಸಾವಿರದ ಎಂಟನೂರು ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸ್ಮರಿಸಿದರು.
ಮಂಗಳವಾರ ಹಳಕರ್ಟಿ ಕಟ್ಟಿಮನಿ ಹಿರೇಮಠದ ಲಿಂ.ಮುನೀಂದ್ರ ಶಿವಯೋಗಿಗಳ ಶಿಲಾ ಮಂಟಪಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಪೂಜ್ಯರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರ ಸಾವಿರ ಸಾವಿರ ಕೋಟಿ ರೂ. ಖರ್ಚು ಮಾಡಿ ಪುಣ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪರಿಣಾಮ ಈ ಹಿಂದೆ ಕಾಶಿ ಕ್ಷೇತ್ರವನ್ನು ನೋಡಿದವರು ಮತ್ತು ಯಾವತ್ತೂ ನೋಡದೇಯಿರುವವರು ಇವತ್ತೇ ಮುನೀಂದ್ರ ಶ್ರೀಗಳ ನೇತೃತ್ವದಲ್ಲಿ ಕಾಶಿಕಡೆ ಮುಖಮಾಡಬೇಕು. ಅಲ್ಲದೆ ಜಗದ್ಗುರುಗಳು ಈಗಾಗಲೇ ಕಾಶಿ ಪೀಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿದ್ದಾರೆ. ಅವರ ಪಟ್ಟಾಭೀಷೇಕ ಸಮಾರಂಭ ಸಂದರ್ಭದಲ್ಲಿ ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಪಡೆದು ಪುನಿತರಾಗಬೇಕು ಎಂದರು.
ಪ್ರತಿ ಗ್ರಾಮದಲ್ಲೊಂದು ದೇವಸ್ಥಾನ ಮತ್ತು ಮಠ ಇರುತ್ತದೆ. ಊರಿನ ಎಲ್ಲಾ ವರ್ಗದವರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಮಠದ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದುಕೊಳ್ಳುವುದು ಪದ್ಧತಿ. ಗುಡಿ ಮಠಕ್ಕಿರುವ ವ್ಯತ್ಯಾಸವಿಷ್ಟೆ, ನಾವು ಯಾರನ್ನು ದೇವರಂತೀವೋ ಅವರೇ ಗುರು ಯಾರಿಗೆ ಗುರು ಅಂತೀವೋ ಅವರೇ ದೇವರು. ದೇವರು ಮತ್ತು ಗುರುವಿನಲ್ಲಿ ಅಂತರವೇನೂ ಇಲ್ಲ. ದೇವರನ್ನು ಯಾರೂ ಪ್ರತ್ಯಕ್ಷವಾಗಿ ನೋಡಲು ಸಾಧ್ಯವಿಲ್ಲ. ದೇವಸ್ಥಾನಕ್ಕೆ ಹೋಗಿ ದೇವರ ವಿಗ್ರಹಗಳನ್ನು ನಾವು ಪೂಜಿಸುತ್ತೇವೆ. ಭಕ್ತಿಯನ್ನು ನಿಷ್ಕಲ್ಮಸ ಮನಸ್ಸಿನಿಂದ ಅರ್ಪಿಸಿ ಅನುಗ್ರಹವನ್ನು ಪಡೆದುಕೊಳ್ಳುತ್ತೇವೆ. ಆದರೂ ಪ್ರತ್ಯಕ್ಷವಾಗಿ ಯಾವ ದೇವರೂ ನಮ್ಮ ಜತೆಗೆ ಮಾತನಾಡುವುದಿಲ್ಲ. ಮಾತನಾಡದಿರುವ ಕಣ್ಣಿಗೆ ಪ್ರತ್ಯಕ್ಷಾವಾಗಿ ಕಾಣದಿರುವ ದೇವರು ತನ್ನ ಮಾಯಾ ಶಕ್ತಿಯನ್ನು ದೂರ ಮಾಡಿ ಜ್ಞಾನ ಶಕ್ತಿಯಿತ್ತ ನನಗೆ ಗುರುವಾಗಿ ಭೂಲೋಕದಲ್ಲಿ ಅವತಾರವನ್ನು ತಾಳುತ್ತಾನೆ ಎಂದು ಸಿದ್ಧಾಂತ ಶಿಖಾಮಣಿ ಹೇಳುತ್ತದೆ ಎಂದು ವಿವರಿಸಿದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರರು, ಪ್ರತ್ಯಕ್ಷಾಗಿ ಕಾಣುವ ಗುರುವೇ ನಮ್ಮ ಪಾಲಿನ ದೇವರು ಎಂದರು.
ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ, ದಂಡಗುಂಡ ಮಠದ ಶ್ರೀಸಂಗನಬಸವ ಸ್ವಾಮೀಜಿ, ಶಖಾಪುರ ತಪೋವನದ ಶ್ರೀಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು.