Advertisement

“ಕಾಂತಾರ’ಅಬ್ಬರದ ಬೆನ್ನಿಗೆ “ಶಿವದೂತೆ ಗುಳಿಗೆ’!

01:47 PM Nov 10, 2022 | Team Udayavani |

ಮಂಗಳೂರು: ತುಳುನಾಡಿನ ದೈವಗಳಾದ ಪಂಜುರ್ಲಿ, ಗುಳಿಗನ ಕಥೆಯಾಧಾರಿತ “ಕಾಂತಾರ’ ಸಿನೆಮಾ ದೇಶ-ವಿದೇಶದಲ್ಲಿ ಮೋಡಿ ಮಾಡುತ್ತಿರುವ ಮಧ್ಯೆಯೇ, ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ “ಶಿವದೂತೆ ಗುಳಿಗೆ’ ತುಳು ನಾಟಕ ಇದೀಗ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ಅಣಿಯಾಗಿದೆ!

Advertisement

“ಕಾಂತಾರ’ ಸಿನೆಮಾದಲ್ಲಿ 20 ನಿಮಿಷ ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಪ್ರದರ್ಶನವಿದ್ದರೆ, ಶಿವದೂತೆ ಗುಳಿಗೆ ನಾಟಕವು ಪೂರ್ಣ ಗುಳಿಗನ ಕಥೆಯಾಧಾರಿತವಾಗಿದೆ. ವಿಶೇಷವೆಂದರೆ, ಕಾಂತಾರದಲ್ಲಿ “ಗುರುವ’ನಾಗಿ ಮಿಂಚಿರುವ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ಅವರೇ ಶಿವದೂತೆ ಗುಳಿಗ ನಾಟಕದಲ್ಲಿ “ಗುಳಿಗ’ನಾಗಿ ಅಭಿನಯಿಸುತ್ತಿದ್ದಾರೆ.

ಕಾಂತಾರ ಸಿನೆಮಾದಲ್ಲಿ ಗುಳಿಗನ ಅಬ್ಬರ ಕಂಡು ಕುತೂಹಲದಿಂದ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳ ಜನರು ಗುಳಿಗ ದೈವದ ವಿಶೇಷತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕರಾವಳಿಯಲ್ಲಿ ಗುಳಿಗನ ಮಹಿಮೆಯನ್ನು ಸಾರುವ ನಾಟಕ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಲು ಆಹ್ವಾನ ಬಂದಿದೆ. ಇದರಂತೆ ತುಳುವಿನಲ್ಲಿರುವ ಶಿವದೂತೆ ಗುಳಿಗೆ ಕನ್ನಡದಲ್ಲಿಯೂ ಪ್ರದರ್ಶನಕ್ಕೆ ರೆಡಿಯಾಗುತ್ತಿದೆ. ಡಬ್ಬಿಂಗ್‌ ಕಾರ್ಯ ಸದ್ಯ ಪ್ರಗತಿಯಲ್ಲಿದೆ.

ಗುಳಿಗನ ಚರಿತ್ರೆಯ ಪಾಡªನ ತುಳು ಭಾಷೆಯಲ್ಲಿರಲಿದೆ. ಉಳಿದಂತೆ ಹಾಡು ಸಹಿತ ಎಲ್ಲ ಸಂಭಾಷಣೆ ಕನ್ನಡದಲ್ಲಿರಲಿದೆ.

ಹಿಂದಿಯಲ್ಲಿಯೂ ಕಾಂತಾರ ಬಗ್ಗೆ ಕುತೂಹಲ ವ್ಯಕ್ತವಾದ ಹಿನ್ನೆಲೆಯಲ್ಲಿ ಗುಳಿಗ ನಾಟಕವನ್ನು ಹಿಂದಿಯಲ್ಲೂ ಪ್ರದರ್ಶಿಸುವಂತೆ ಬೇಡಿಕೆ ಬಂದಿದೆ.

Advertisement

ಹೀಗಾಗಿ ಹಿಂದಿ ಅವತರಣಿಕೆಯಲ್ಲಿಯೂ ಗುಳಿಗನ ಕಥೆ ನಾಟಕದ ಸ್ವರೂಪದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹಿಂದಿಯಲ್ಲಿ ಉತ್ತಮ ಫಲಿತಾಂಶ ದೊರೆತರೆ ಮಲಯಾಳ, ಗುಜರಾತಿ ಹಾಗೂ ಮರಾಠಿ ಭಾಷೆಯಲ್ಲಿಯೂ ಗುಳಿಗನ ನಾಟಕ ಪ್ರದರ್ಶನಕ್ಕೆ ನಿರ್ದೇಶಕ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲು ಅವರು ಚಿಂತನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next