Advertisement

ಮುಂಬಯಿಯಲ್ಲಿ ಗೋಶಾಲೆ: ಬಿಜೆಪಿ ಯೋಜನೆಗೆ ಶಿವಸೇನೆ ವಿರೋಧ!

03:29 PM Jul 22, 2017 | Team Udayavani |

ಮುಂಬಯಿ: ನಗರದೊಳಗೆ  ಗೋಶಾಲೆಗಳನ್ನು ತೆರೆಯಲು ಹೆಚ್ಚುವರಿ ಭೂಮಿಯನ್ನು  ಕೋರಿ ಬಿಜೆಪಿಯು  ಮಂಡಿಸಿರುವ ಪ್ರಸ್ತಾವನೆಯನ್ನು ಶಿವ ಸೇನೆಯು ಆಕ್ಷೇಪಿಸಿ ಬದಿಗಿಟ್ಟಿದೆ.

Advertisement

ಮುಂಬಯಿಯಲ್ಲಿ ಹೆಚ್ಚುವರಿ ಗೋಶಾಲೆಗಳನ್ನು ತೆರೆಯಲು ಅವಕಾಶ ನೀಡುವ ಯಾವುದೇ ರೀತಿಯ ನಡೆಗೆ ನಾವು ಅನುಮತಿಸುವುದಿಲ್ಲ ಎಂದು ಶಿವಸೇನೆ ಸ್ಪಷ್ಟಪಡಿಸಿದೆ.  ನಗರದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆ ಯಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ.  ಹೊಸ ಗೋಶಾಲೆಗಳನ್ನು ಇನ್ನು ಬೇಕಾದರೆ ನಗರದ ಹೊರವಲಯದಲ್ಲಿ ಸ್ಥಾಪಿಸಬೇಕು ಎಂದು ಪಕ್ಷ ಹೇಳಿದೆ.

ಮುಂಬಯಿಯ ಮಾಜಿ ಮೇಯರ್‌ ಮತ್ತು ಬಿಜೆಪಿ ನಗರಸೇವಕ ಡಾ| ರಾಮ್‌ ಬಾರೋಟ್‌ ಅವರು, ಮುಂಬಯಿ, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ 3 ಹೊಸ ಗೋಶಾಲೆಗಳನ್ನು ತೆರೆಯಲು ಅಭಿವೃದ್ಧಿ ಯೋಜನೆಯಲ್ಲಿ 10,000 ಚದರ ಅಡಿ ಭೂಮಿಯನ್ನು ಮೀಡಲಿಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯಲ್ಲಿ ಪ್ರಸ್ತಾವನೆಯೊಂದನ್ನು ಮಂಡಿಸಿದ್ದು, ಅದಕ್ಕೆ ಸಭಾಗೃಹದಿಂದ ಅನುಮೋದನೆಯೂ ಸಿಕ್ಕಿತ್ತು. ಆದರೆ, ಈಗ ಮಹಾನಗರ ಪಾಲಿಕೆ ಆಡಳಿತವು ಅದನ್ನು ಏಕಾಏಕಿಯಾಗಿ ರದ್ದುಗೊಳಿಸಿದೆ. ಈ ಸಂಬಂಧ ಆಡಳಿತದ ಕಡೆಯಿಂದ ಸುಧಾರಣಾ ಸಮಿತಿಗೆ ಅಭಿಪ್ರಾಯವನ್ನು ಮಂಡಿಸಲಾಗಿದ್ದು, ಗುರುವಾರ  ಸುಧಾರಣೆ ಸಮಿತಿ ಸಭೆಯಲ್ಲಿ ಆ ಬಗ್ಗೆ  ಚರ್ಚೆ ನಡೆಯಿತು.

ಆಡಳಿತದ ಅಭಿಪ್ರಾಯದ ಕುರಿತ ಚರ್ಚೆಯ ವೇಳೆ ಬಿಜೆಪಿ ನಗರಸೇವಕರು ಗೋವಿನ ಉಪಯುಕ್ತತೆಗಳ ಬಗ್ಗೆ ವಿವರಿಸುತ್ತ, ತಮ್ಮ ಪ್ರಸ್ತಾವನೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿದರು.  ಆದರೆ, ಶಿವಸೇನೆಯು ನಗರದಲ್ಲಿ ಗೋಶಾಲೆಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತ, ಬಿಜೆಪಿಯ ಬೇಡಿಕೆಗೆ ತಿರಸ್ಕರಿಸಿತು.

ನಗರವು ಮಳೆಗಾಲದ ಸಮಯದಲ್ಲಿ ಪ್ರವಾಹ ಮತ್ತು ನೀರು ಜಮಾವಣೆಯಂತಹ ಘಟನೆಗಳಿಗೆ ಈಡಾಗುತ್ತದೆ. ಸಾಮಾನ್ಯವಾಗಿ, ಗೋಶಾಲೆಗಳ ಸಗಣಿ ಮತ್ತು ತ್ಯಾಜ್ಯಗಳನ್ನು ನಗರದ ನದಿ ಮತ್ತು ನಾಲೆಗಳಲ್ಲೇ ವಿಲೇವಾರಿ ಮಾಡಲಾಗುತ್ತದೆ.  2005ರಲ್ಲಿ ಉಂಟಾದ ಪ್ರವಾಹಕ್ಕೆ ಗೋಶಾಲೆಯೂ ಒಂದು ಕಾರಣವಾಗಿದೆ. ಎಲ್ಲೆಲ್ಲಿ  ಗೋಶಾಲೆಗಳು ಇದ್ದವೋ, ಅಲ್ಲಲ್ಲಿ ನದಿ-ನಾಲೆಗಳ ಪರಿಸ್ಥಿತಿ ಕೆಟ್ಟದಾಗಿತ್ತು ಎಂದು ಮಾಜಿ ಮೇಯರ್‌ ಮತ್ತು ಶಿವಸೇನೆ ನಗರಸೇವಕಿ ಶ್ರದ್ಧಾ ಜಾಧವ್‌ ಹೇಳಿದ್ದಾರೆ.

Advertisement

ಗೋಶಾಲೆಗೆ ನಮ್ಮ ವಿರೋಧವಿಲ್ಲ. ಅದನ್ನು ನಗರದ ಹೊರವಲಯಗಳಲ್ಲಿ ಸ್ಥಾಪಿಸಬೇಕೆಂಬುದು ನಮ್ಮ ವಾದವಾಗಿದೆ  ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next