ಮುಂಬಯಿ: ಮುಂಬಯಿಯ ಶಿವಸೇನಾ ಶಾಸಕ ರಮೇಶ್ ಲಟ್ಕೆ (52ವರ್ಷ) ಹೃದಯಸ್ತಂಭನದಿಂದ ದುಬೈನಲ್ಲಿ ಸಾವನ್ನಪ್ಪಿರುವುದಾಗಿ ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಮದುವೆ ವದಂತಿ: ಸುನೀಲ್ ಶೆಟ್ಟಿ ಹೇಳಿದ್ದೇನು?
ರಮೇಶ್ ಲಟ್ಕೆ ಕುಟುಂಬ ಸದಸ್ಯರ ಜತೆ ದುಬೈ ಪ್ರವಾಸಕ್ಕೆ ತೆರಳಿದ್ದು, ಬುಧವಾರ ತಡರಾತ್ರಿ ಲಟ್ಕೆ ಅವರು ಹೃದಯಸ್ತಂಭನದಿಂದ ವಿಧಿವಶರಾಗಿದ್ದಾರೆಂದು ಪಕ್ಷದ ಪದಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ರಮೇಶ್ ಲಟ್ಕೆ ಅವರು ಮುಂಬಯಿಯ ಪೂರ್ವ ಅಂಧೇರಿ ಕ್ಷೇತ್ರದಿಂದ ಎರಡು ಬಾರಿ ಶಿವಸೇನಾದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗುವ ಮುನ್ನ ಲಟ್ಕೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ನ ಕಾರ್ಪೋರೇಟರ್ ಆಗಿದ್ದರು.
ರಮೇಶ್ ಲಟ್ಕೆ ಅವರ ಪಾರ್ಥಿವ ಶರೀರ ಇಂದು ಸಂಜೆ ಮುಂಬಯಿ ತಲುಪುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ. ಘಟನೆ ಬಗ್ಗೆ ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಾಹಿತಿ ನೀಡಿದ್ದು, ಪಕ್ಷದ ಹಿರಿಯ ಮುಖಂಡ ಲಟ್ಕೆ ಅವರ ಪಾರ್ಥಿವ ಶರೀರ ದುಬೈನಿಂದ ಮುಂಬೈಗೆ ತರುವ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸಲು ತಿಳಿಸಿರುವುದಾಗಿ ಪಕ್ಷದ ಪದಾಧಿಕಾರಿ ವಿವರ ನೀಡಿದ್ದಾರೆ.
ರಮೇಶ್ ಲಟ್ಕೆ ಅವರ ನಿಧನದ ಬಗ್ಗೆ ಶಿವಸೇನಾ ವಕ್ತಾರೆ ಪ್ರಿಯಾಂಕ ಚತುರ್ವೇದಿ ಸಾಂತ್ವಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ಅವರ ಆಕಸ್ಮಿಕ ನಿಧನದ ಸುದ್ದಿಗೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ನಿತೇಶ್ ರಾಣೆ, ಕುಟುಂಬ ಸದಸ್ಯರಿಗೆ ಸಾಂತ್ವಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.