Advertisement

ಸಾಮ್ನಾದಲ್ಲಿ ಅಯೋಧ್ಯೆ ಭೂಮಿ ಖರೀದಿ ವಿವಾದದ ಲೇಖನ ಪ್ರಕಟ; ಶಿವಸೇನಾ, ಬಿಜೆಪಿ ಘರ್ಷಣೆ

10:08 AM Jun 17, 2021 | Team Udayavani |

ಮುಂಬಯಿ: ರಾಮಮಂದಿರ ಭೂ ಖರೀದಿ ಹಗರಣದ ಕುರಿತು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಲೇಖನದ ಪರಿಣಾಮ ಮುಂಬಯಿಯ ದಾದರ್ ಪ್ರದೇಶದಲ್ಲಿ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ(ಜೂನ್ 16) ಘರ್ಷಣೆ ನಡೆದಿದ್ದು, ನಂತರ ಬಿಜೆಪಿ ಯುವ ಘಟಕ ಪ್ರತಿಭಟನಾ ಮೆರವಣಿಗೆ ನಡೆಸಿದೆ ಎಂದು ವರದಿ ಹೇಳಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಎರಡು ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಿವಸೇನಾ ಕಾರ್ಯಕರ್ತರ ವಿರುದ್ಧ ಒಂದು ಎಫ್ ಐಆರ್ ದಾಖಲಾಗಿದ್ದು, ಮತ್ತೊಂದು ಕೋವಿಡ್ 19 ಲಾಕ್ ಡೌನ್ ನಡುವೆ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ 30 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಎರಡು ಅಪರಾಧಗಳನ್ನು ದಾಖಲಿಸಲಾಗಿದೆ. 30 ಜನರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 188, 269, 51ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ನಂತರ ಏಳು ಮಂದಿ ವಿರುದ್ಧ ಐಪಿಸಿ ಸೆಕ್ಷನ್ 143, 147, 149, 392, 324, 323, 354, 509ರ ಪ್ರಕಾರ ಎರಡನೇ ಅಪರಾಧ ದಾಖಲಿಸಲಾಗಿದೆ ಎಂದು ಮುಂಬಯಿ ಪೊಲೀಸರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಅಯೋಧ್ಯೆ ಭೂ ಖರೀದಿ ಒಪ್ಪಂದದ ವಿವಾದದ ಬಗ್ಗೆ ಶ್ರೀರಾಮ್ ಜನ್ಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟನೆ ನೀಡುವ ಮೂಲಕ ಅನುಮಾನ ಬಗೆಹರಿಸಬೇಕು ಎಂದು ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿರುವುದು ಎರಡು ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next