ಶಿರಸಿ: ದೀಘ೯ ಕಾಲದ ಪ್ರಾರ್ಥನೆ ಈಗ ಈಡೇರುತ್ತಿದೆ.ಹಾಗಾಗಿ ಶಿಷ್ಯ ಸ್ವೀಕಾರ ಎಂಬುದು ಉತ್ಸವವಾಗಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶಂಜರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಬಣ್ಣಿಸಿದರು.
ಭಾನುವಾರ ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಆರಂಭಗೊಂಡ ಐದು ದಿನಗಳ ಶಿಷ್ಯ ಸ್ವೀಕಾರ ಮಹೋತ್ಸವ ಹಿನ್ನೆಲೆಯಲ್ಲಿ ನಡೆದ ಗ್ರಂಥ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ಐದುವರೆ ವರ್ಷದಿಂದ ನಿರಂತರ ಪ್ರಾರ್ಥನೆ ಮಾಡುತ್ತಿದ್ದೆವು. ಆ ದೀರ್ಘ ಕಾಲದ ಪ್ರಾರ್ಥನೆ ಈಡೇರಿದ ಖುಷಿ ಆಗುತ್ತಿದೆ. ಪರಿಣಾಮದ ಮೂಲಕ ಪ್ರಾರ್ಥನೆ ಈಡೇರುತ್ತಿದೆ ಎಂದರು.ಪರಿಣಾಮಗಳ, ಅನುಭವಗಳ ಮೂಲಕ ದೇವರ ಅಸ್ತಿತ್ವ ಬರುತ್ತದೆ. ದೇವರ ನೇರ ಅನುಭವ ಇದ್ದವರು ಜ್ಞಾನಿಗಳು, ಯೋಗಿಗಳು. ವಿಜ್ಞಾನ ಅನುಭವ ಆದವರು ಜ್ಞಾನಿಗಳು. ಇಂಥ ಅನುಭವಿಗಳ, ಜ್ಞಾನಿಗಳ ಮಾರ್ಗದರ್ಶನ ಸಮಾಜಕ್ಕೆ ಸದಾ ಸಿಗಬೇಕು. ಇಲ್ಲವಾದರೆ ಅನಗತ್ಯ ಅಂಶ ಧರ್ಮಕ್ಕೆ ಸೇರಿ ಧರ್ಮ ತಪ್ಪಿ ಹೋಗುತ್ತದೆ. ಈ ಕಾರಣದಿಂದ ಧರ್ಮ ಪೀಠ ಸ್ಥಾಪನೆ ಆಗಿದೆ ಎಂದರು.
ಸಮಾಜದ ನಡೆ, ಧಾರ್ಮಿಕ ನಡೆ ಸರಿಯಾಗಿ ಇರಲಿ ಎಂಬುದೇ ಗುರು ಪೀಠಗಳ ಆಶಯ. ಶಿಷ್ಯ ಸ್ವೀಕಾರದ ಮೂಲಕ ಮುಂದಿನ ಹೆಜ್ಜೆ ಇಡುತ್ತಿದೆ. ಪರಂಪರೆಯ ಶಕ್ತಿ ಇದನ್ನು ಮಾಡಿಸುತ್ತಿದೆ. ಧರ್ಮದ ವ್ಯವಸ್ಥೆ ಮುಂದುವರಿಸುವದೇ ಆಶಯ ಎಂದರು.
ಸಚಿವ ಮಂಕಾಳು ವೈದ್ಯ, ಶಾಸಕ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ, ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಠದ ಅಧ್ಯಕ್ಷ ವಿ.ಎನ್.ಹೆಗಡೆ, ಕಾರ್ಯದರ್ಶಿ ಗಣಪತಿ ಗೊಡ್ವೆಮನೆ ಇತರರು ಇದ್ದರು. ಶಿವರಾಮ ಭಟ್ ಸ್ವಾಗತಿಸಿದರು. ಡಿ.ಕೆ.ಗಾಂವ್ಕರ್ ನಿರ್ವಹಿಸಿದರು.