Advertisement

ಶಿಶಿಲ ದೇವರ ಮೀನಿಗೂ ಕಾಡಲಿದೆಯೇ ಜಲಕ್ಷಾಮ?

10:56 PM Apr 11, 2021 | Team Udayavani |

ಬೆಳ್ತಂಗಡಿ: ಅರಣ್ಯದಂಚಿನ ಪ್ರದೇಶಗಳಲ್ಲಿ ತಂಪುಗಾಳಿ ಬೀಸುವ ಬದಲಾಗಿ ಉರಿಬಿಸಿಲಿನಿಂದ ತಾಪಮಾನ ಏರತೊಡಗಿದೆ. ತಾಲೂಕಿನ ಬಹುತೇಕ ಪ್ರಮುಖ ನದಿಗಳು ನೀರಿನ ಹರಿವು ನಿಲ್ಲಿಸಿದ್ದರ ಪರಿಣಾಮ ಕೃಷಿ ಚಟುವಟಿಕೆ ಆವಶ್ಯಕ್ಕನುಗುಣವಾಗಿ ನೀರಿನ ಕೊರತೆ ಜತೆಗೆ ಕಪಿಲಾ ನದಿ ತಟದಲ್ಲಿರುವ ಮತ್ಸ್ಯ ಕ್ಷೇತ್ರವೆಂದೆ ಹೆಸರುವಾಸಿಯಾಗಿರುವ ಶಿಶಿಲ ಶಿಶಿಲೇಶ್ವರ ದೇವರ ಮೀನುಗಳಿಗೆ ಜಲಕ್ಷಾಮದ ಕೊರತೆ ಕಾಡುವಂತಿದೆ.

Advertisement

ಶಿಶಿಲದಲ್ಲಿ ವಿಶೇಷವಾಗಿ ಮೀನನ್ನು ದೇವರ ಪ್ರತಿರೂಪ ಎಂದೇ ನೂರಾರು ವರ್ಷಗಳಿಂದ ಪೂಜಿ ಸುತ್ತಾ ಬರಲಾಗಿದೆ. ಪ್ರಕೃತಿಯ ಆರಾಧನೆಯೇ ದೇವರ ಆರಾ ಧನೆ ಎಂಬಂತೆ ಇಲ್ಲಿ ತೀರ್ಥಕ್ಕಾಗಿ ಮೀನು ಗಳಿರುವ ನದಿ ನೀರನ್ನೇ ಬಳಸುತ್ತಿರುವುದು ವಿಶೇಷವಾಗಿದೆ. ಆದರೆ ಸದ್ಯ ತಾಪಮಾನ ವಿಪರೀತ ಏರಿಕೆಯಾಗುತ್ತಿರುವುದರಿಂದ ಕಪಿಲಾ ನದಿ ನೀರು ಒಳಹರಿವು ಕ್ಷೀಣಿಸುತ್ತಿದ್ದು ಮತ್ಸ್ಯ ಕ್ಷೇತ್ರಕ್ಕೂ ನೀರಿನ ಸಮಸ್ಯೆ ಎದುರಾಗಲಿದೆ.

ಆಮ್ಲಜನಕದ ಕೊರತೆ
ಕಪಿಲಾ ನದಿಗೆ ಶಿಶಿಲ ದೇವಸ್ಥಾನ ಮೇಲ್ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು, ಇದೇ ನೀರನ್ನು ಅವಲಂಬಿಸಲಾಗಿದೆ. ಆದರೆ ಕಿಂಡಿಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಮೇಲ್ಭಾಗದಲ್ಲಿ ನದಿ ನೀರು ಒಳಹರಿವು ಕ್ಷೀಣಿಸಿದ್ದರಿಂದ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಕಾಡುವ ಸಾಧ್ಯತೆ ದಟ್ಟವಾಗಿದೆ. ಮೀನುಗಳಿಗೆ ನೀರಿನ ಮಟ್ಟ ಕಡಿಮೆಯಾದಲ್ಲಿ ಆಮ್ಲಜನಕದ ಕೊರತೆ ಎದುರಾಗುವುದರ ಜತೆಗೆ ನೀರಿನ ತಾಪಮಾನವೂ ಏರಿಕೆಯಾಗಿ ಅವುಗಳ ದೇಹರಚನೆಗೆ ಸಮಸ್ಯೆ ಎದುರಾಗುವುದು ಸಹಜ. ಶಿಶಿಲ ದೇವಸ್ಥಾನದ ಎರಡು ಕಿ.ಮೀ. ಸುತ್ತಮುತ್ತ ನದಿನೀರಿನಲ್ಲಿ ಮೀನು ಹಿಡಿಯುವುದನ್ನು ಈಗಾಗಲೇ ನಿಷೇಧಿಸಲಾಗಿದೆ.

ಜೀವನದಿ ನೇತ್ರಾವತಿ ಒಡಲು ಬರಿದು
ನೇತ್ರಾವತಿ ನದಿಯ ಹರಿವು ಕಲ್ಮಂಜ ಗ್ರಾಮದ ಕುದೆಂಚಿ ತನಕ ಬಹುತೇಕ ನಿಂತುಹೋಗಿದೆ. ನೀರಿನ ಹರಿವು ನಿಂತಿರುವ ಕಾರಣ ನದಿ ಇಕ್ಕೆಲಗಳಲ್ಲಿ ವಾಸಿಸುವ ಕೃಷಿಕರಿಗೆ ಹಾಗೂ ನದಿನೀರನ್ನೇ ಅವಲಂಬಿಸಿದ ಮಂದಿಗೆ ನೀರಿನ ಸಮಸ್ಯೆಯ ಚಿಂತೆ ಎದುರಾಗಿದೆ. ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಇಂದಬೆಟ್ಟು, ಮುಂಡಾಜೆ ಕನ್ಯಾಡಿ ಗ್ರಾಮಗಳ ಮೂಲಕ ಹದಿನೈದರಿಂದ ಇಪ್ಪತ್ತು ಕಿ.ಮೀ. ದೂರವನ್ನು ಕ್ರಮಿಸುವ ನೇತ್ರಾವತಿ ನದಿಗೆ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ ನದಿ ಸಂಗಮಗೊಳ್ಳುತ್ತದೆ.

Advertisement

ಕೃಷಿಕರಿಗೆ ತಟ್ಟಲಿದೆ ಬರ
ದಿಡುಪೆಯಿಂದ ಕಲ್ಮಂಜ ತನಕ ಪ್ರದೇಶದಲ್ಲಿ ನೇತ್ರಾವತಿ ನದಿಗೆ ಹಲವಾರು ಸಾಂಪ್ರದಾಯಿಕ ಕಟ್ಟಗಳು, ಕಿಂಡಿ ಅಣೆಕಟ್ಟು ಇದ್ದು ಇದರ ನೀರು ಕೃಷಿಕರ ಬದುಕಿಗೆ ಆಧಾರವಾಗಿದೆ. ಇದೀಗ ಹೆಚ್ಚಿನ ಕಡೆ ಹರಿವು ಇಲ್ಲದ ಕಾರಣ ಇವು ಬತ್ತಿಹೋಗಿ ನೂರಾರು ಎಕರೆ ಪ್ರದೇಶಕ್ಕೆ ನೀರಿನ ಆಶ್ರಯ ಇಲ್ಲವಾಗಿದೆ. ನದಿ ನೀರು ಬತ್ತಿದ ಕಾರಣ ಕೆರೆ ಬಾವಿಗಳು ಖಾಲಿಯಾಗುತ್ತಿವೆ. ಇನ್ನು ಸುಮಾರು ಎರಡು ತಿಂಗಳ ಕಾಲ ಬೇಸಗೆ ದಿನಗಳಿದ್ದು ಆ ಸಮಯದಲ್ಲಿ ಕೃಷಿಗೆ ನೀರು ಒದಗಿಸುವ ವ್ಯವಸ್ಥೆಗಳ ಬಗ್ಗೆ ಕೃಷಿಕರು ಚಿಂತಿತರಾಗಿದ್ದಾರೆ.

ಮೃತ್ಯುಂಜಯ ನದಿ ನೀರು
ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ನದಿಗೆ ಹಲವು ಕಿಂಡಿ ಅಣೆಕಟ್ಟುಗಳು, ಸಾಂಪ್ರ ದಾಯಿಕ ಕಟ್ಟಗಳಿವೆ. ಬೇಸಗೆಯಲ್ಲಿ ನೇತ್ರಾವತಿ ನದಿಗೆ ಮೃತ್ಯುಂಜಯ ನದಿ ಹೆಚ್ಚಿನ ಬಲ ಒದಗಿಸುವ ಕಾರಣ ಪಜಿರಡ್ಕದಿಂದ ನದಿ ಹರಿವ ಕೆಳಭಾಗದ ಕೃಷಿಕರಿಗೆ ಸದ್ಯ ನೀರಿನ ಸಮಸ್ಯೆ ಎದುರಾಗುವ ಭೀತಿ ಇಲ್ಲ.

ಹಿಂದಿಗಿಂತ ಹೆಚ್ಚಿನ ನೀರು ಸಂಗ್ರಹ
ಕಪಿಲಾ ನದಿಯಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿರುತ್ತದೆ. ಮಳೆಯಾದಲ್ಲಿ ನೀರಿನ ಸಮಸ್ಯೆ ಎದುರಾಗದು. ಕಿಂಡಿಅಣೆಕಟ್ಟುಗಳ ಸಂಖ್ಯೆ ಹೆಚ್ಚಳವಾದ್ದರಿಂದ ಹಿಂದಿಗಿಂತ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ.
-ಶ್ರೀನಿವಾಸ ಮೂಡೆತ್ತಾಯ, ಶಿಶಿಲೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ

ಹೂಳು ತುಂಬಿದ ನದಿಗಳು
2019ರ ಪ್ರವಾಹದಲ್ಲಿ ನದಿ ಪ್ರದೇಶದಲ್ಲಿ ಹೂಳು ಮತ್ತು ಮರಳು ತುಂಬಿದೆ. ಇದು ನದಿಗಳ ನೀರಿನ ಸೆಲೆ ಮತ್ತು ಮೂಲಗಳಿಗೆ ಅಡ್ಡಿಯಾಗಿದೆ, ನದಿ ಪ್ರದೇಶದ ಹೊಂಡಗಳಲ್ಲಿ ಕೂಡ ಭಾರಿ ಪ್ರಮಾಣದ ಹೂಳು ತುಂಬಿದ್ದು ಇದು ನೀರನ್ನು ಹಿಡಿದಿಟ್ಟು ಮಟ್ಟ ಕಾಯ್ದು ಕೊಳ್ಳಲು ಅಡ್ಡಿಯಾಗುತ್ತಿದೆ.

ಪ.ಪಂ. ವ್ಯಾಪ್ತಿಯಲ್ಲೂ ಕೊರತೆ
ಕುಡಿಯುವ ನೀರಿಗಾಗಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಸೋಮಾವತಿ ನದಿ ನೀರನ್ನು ಆಶ್ರಯಿಸಲಾಗಿದೆ. ಉಳಿದಂತೆ 11 ವಾರ್ಡ್‌ ಗಳಲ್ಲಿ ಒಟ್ಟು 14 ಬೋರ್‌ವೆಲ್‌ಗ‌ಳನ್ನು ಅವಲಂಬಿಸಿದೆ. 8 ಗಂಟೆ ಬದಲಾಗಿ 16ಗಂಟೆ ಚಾಲನೆ ಮಾಡಲಾಗುತ್ತಿದೆ. ಹೀಗಾಗಿ ಕೃಷಿ ಚಟುವಟಿಕೆಗೆ, ಹೂವಿನ ತೋಟಗಳಿಗೆ ನೀರು ಬಳಸದಂತೆ ಪ.ಪಂ. ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next