ಶಿರ್ವ: ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣವನ್ನು ರೂಢಿಸಿಕೊಂಡು ವಿದ್ಯಾಸಂಸ್ಥೆಗಳಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಿಸಿಕೊಂಡು ಉತ್ತಮ ವಿಚಾರಧಾರೆಯೊಂದಿಗೆೆ ಜ್ಞಾನ ಸಂಪಾದಿಸಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಕಾಲೇಜಿನ ಹಳೆವಿದ್ಯಾರ್ಥಿ ವಾಲ್ಟರ್ ಡಿಸೋಜಾ ನಂದಳಿಕೆ ಹೇಳಿದರು.
ಅವರು ಇತ್ತೀಚಿಗೆ ಶಿರ್ವ ಸಂತ ಮೇರಿ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರ್ವ ಸಂತ ಮೇರಿ ಮತ್ತು ಡಾನ್ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ|ಫಾ|ಡಾ| ಲೆಸ್ಲಿ ಡಿಸೋಜಾ ಮಾತನಾಡಿ, ವಿದ್ಯಾರ್ಥಿ ಸಂಘಟನೆಯು ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ|ಹೆರಾಲ್ಡ್ ಐವನ್ ಮೋನಿಸ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಉಪನ್ಯಾಸಕ ಮೆಲ್ವಿನ್ ಕ್ಯಾಸ್ತಲಿನೊ ಅತಿಥಿ ಪರಿಚಯ ಮಾಡಿದರು.
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರೋಹಿತ್, ಕಾರ್ಯದರ್ಶಿ ತರುಣ್ ರಮೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಸಹನಾ ಸಾಂಸ್ಕೃತಿಕ ಕಾರ್ಯದರ್ಶಿ ವೈಷ್ಣವಿ ಹಾಗೂ ಕ್ರೀಡಾ ಕಾರ್ಯದರ್ಶಿಗಳಾದ ಶೇಖ್ ಐಮನ್ ಮತ್ತು ಸುಪ್ರೀತಾ ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಅಧ್ಯಾಪಕ, ಅಧ್ಯಾಪಕೇತರ ವೃಂದ,ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಉಪನ್ಯಾಸಕಿ ಯಶೋದಾ ಸ್ವಾಗತಿಸಿದರು. ಸುಪ್ರಿಯಾ ಮತ್ತು ಲಾರೆನ್ಸ್ ಲೋಪೆಸ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಡೆರಿಲ್ ಆ್ಯನ್ಸನ್ ಡಿಸಿಲ್ವ ವಂದಿಸಿದರು.