ಶಿರ್ವ: ಪ್ರಭು ಏಸುವಿನ ಮಾತೆ ಮೇರಿ ನಮ್ಮೆಲ್ಲರ ಮಾತೆಯಾಗಿದ್ದು, ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿ ವಿಶ್ವಾಸದಿಂದ ಅರಿತುಕೊಂಡು ಜೀವನ ನಡೆಸಲು ದೇವರ ಆಶೀರ್ವಾದವಿರಲಿ. ಬದುಕಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಆರೋಗ್ಯಮಾತೆಯ ಅನುಗ್ರಹದಿಂದ ಮಾತೆಯ ಮಕ್ಕಳಾಗಿ ಆದರ್ಶ ಜೀವನ ನಡೆಸಿ ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅ|ವಂ| ಡಾ| ಎಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.
ಅವರು ಬುಧವಾರ ಬೆಳಗ್ಗೆ ಶಿರ್ವ ಆರೋಗ್ಯ ಮಾತಾ (ಸಾವುದ್ ಅಮ್ಮನವರ)ದೇವಾಲಯದ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ವಂ|ಡಾ| ಲೆಸ್ಲಿ ಡಿಸೋಜಾ ಆಶೀರ್ವಚನ ನೀಡಿ ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಭಕ್ತಾಧಿಗಳಿಗೆ ದೇವರ ಅಶೀರ್ವಾದ ಲಭಿಸಲಿ. ಸಾವುದ್ ಅಮ್ಮನವರು ಸರ್ವರನ್ನೂ ಹರಸಿ ಎಲ್ಲರ ಕೋರಿಕೆ ಈಡೇರಿಸಲಿ ಎಂದರು.
ಐಸಿವೈಎಂನ ರಾಷ್ಟ್ರೀಯ ನಿರ್ದೇಶಕ ವಂ|ಚೇತನ್ ಮಚಾದೋ, ಸಹಾಯಕ ಧರ್ಮಗುರುಗಳಾದ ವಂ| ರೋಲ್ವಿನ್ ಅರಾನ್ಹಾ ,ವಂ| ರೋನ್ಸನ್ ಪಿಂಟೊ, ವಂ| ಜೇಸನ್ ಲೋಬೋ , ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯ ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ 50ಕ್ಕೂ ಹೆಚ್ಚು ಧರ್ಮಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು. ಚರ್ಚ್‌ನ ವಿವಿಧ ಕಾರ್ಯಗಳಲ್ಲಿ ಸಹಕರಿಸಿದ ಮಹನೀಯರನ್ನು ಗೌರವಿಸಲಾಯಿತು.
ಸರ್ವ ಧರ್ಮದ ಸಾವಿರಾರು ಭಕ್ತರು ಆಗಮಿಸಿ ಆರೋಗ್ಯ ಮಾತೆಯ ದರ್ಶನ ಪಡೆದು ತಮ್ಮ ಸಂಕಷ್ಟ ನಿವಾರಣೆಗಾಗಿ ಮೊಂಬತ್ತಿ ಉರಿಸಿ ಹರಕೆ ಸಲ್ಲಿಸಿ ತೀರ್ಥ,ಎಣ್ಣೆ ಪ್ರಸಾದ ಪಡೆದರು. ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹ, ಕಾರ್ಯದರ್ಶಿ ಫ್ಲಾವಿಯಾ ಡಿಸೋಜಾ, ಚರ್ಚ್ ಆಯೋಗದ ಸಂಯೋಜಕಿ ಲೀನಾ ಮಚಾದೋ, ಚರ್ಚ್ ಆರ್ಥಿಕ ಮತ್ತು ಪಾಲನ ಮಂಡಳಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್‌ನ ಧರ್ಮ ಭಗಿನಿಯರು, ಚರ್ಚ್‌ನ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಐಸಿವೈಎಂ,ಉಸ್ವಾಸ್ ಮತ್ತು ಸ್ವಾಕ್ ಸಂಘಟನೆಯ ಪದಾಧಿಕಾರಿಗಳು,ಭಕ್ತರು ಉಪಸ್ಥಿತರಿದ್ದರು.