ಶಿರ್ವ: ಮಾತೆ ಮೇರಿಯ ನಿರ್ಮಲ ಹೃದಯ, ಮನಸ್ಸು ಮತ್ತು ಪ್ರೀತಿಯ ಜೀವನ ನಮಗೆಲ್ಲ ಮಾದರಿಯಾಗಿದೆ. ಪ್ರಭು ಏಸು ನೀಡಿದ ಕರೆಯಂತೆ ತ್ಯಾಗ ಸೇವೆಯೇ ನಮ್ಮ ಬದುಕಿನ ಮೂಲ ಧ್ಯೇಯ ಆಗಬೇಕಿದೆ. ದೈನಂದಿನ ಬದುಕಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಸನ್ಮಾರ್ಗದಲ್ಲಿ ಬಾಳಲು ಪ್ರಯತ್ನಿಸಿ ಪವಿತ್ರರಾಗೋಣ ಎಂದು ಕುಂದಾಪುರ ವಲಯದ ಪ್ರಧಾನ ಗುರು ವಂ| ಸ್ಟಾನಿ ತಾವ್ರೋ ಹೇಳಿದರು.
ಅವರು ಬುಧವಾರ ಬೆಳಗ್ಗೆ ಶಿರ್ವ ಆರೋಗ್ಯ ಮಾತಾ (ಸಾವುದ್ ಅಮ್ಮನವರ) ದೇವಾಲಯದ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಕಲ್ಯಾಣಪುರ ಮಿಲಾಗ್ರಿಸ್ ಕೆಥಡ್ರಲ್‌ನ ರೆಕ್ಟರ್ ಮತ್ತು ವಲಯ ಜ್ಯೇಷ್ಠ ಗುರು ವಂ| ಲಾರೆನ್ಸ್ ಡಿ’ಸೋಜಾ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೋನ್ಸಾ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ವಂ| ರಿಚರ್ಡ್ ಕುವೆಲ್ಲೊ, ಕೆನಡಾದ ಕಾರ್ಮೆಲೆಡ್ ಪ್ರೊವಿನ್ಶಿಯಲ್‌ನ ವಂ| ಹೆನ್ರಿ ಆಳ್ವ, ಕಾರ್ಕಳ ಅತ್ತೂರು ಸಂತ ಬಸಿಲಿಕಾದ ವಂ| ಜಾರ್ಜ್ ಡಿ’ಸೋಜಾ,ಶಿರ್ವ ಆರೋಗ್ಯ ಮಾತೆಯ ದೇವಾ ಲಯದ ಪ್ರಧಾನ ಧರ್ಮಗುರು ವಂ| ಡೆನ್ನಿಸ್ ಡೇಸಾ, ಸಹಾಯಕ ಧರ್ಮಗುರುಗಳಾದ ವಂ| ಮಹೇಶ್ ಡಿ’ಸೋಜಾ, ವಂ| ಅಶ್ವಿನ್ ಅರಾನ್ಹಾ ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತದ 50ಕ್ಕೂ ಹೆಚ್ಚು ಧರ್ಮಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, ಚರ್ಚ್ ಆಯೋಗದ ಸಂಚಾಲಕ ಮೆಲ್ವಿನ್ ಅರಾನ್ಹಾ, ಪಾಲನಾ ಮಂಡಳಿಯ ಸದಸ್ಯರಾದ ಜೂಲಿ ಯಾನ್ ರೊಡ್ರಿಗಸ್, ಮೆಲ್ವಿನ್ ಡಿ’ಸೋಜಾ, ಡಯಾನಾ ಸಲ್ದಾನಾ, ಪುಷ್ಪಾ ಫೆರ್ನಾಂಡಿಸ್, ಜಿ.ಪಂ.ಸದಸ್ಯ ವಿಲ್ಸನ್ ರೊಡ್ರಿಗಸ್ ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ ಧರ್ಮ ಗುರುಗಳು,
ಧರ್ಮಭಗಿನಿಯರು ಉಪಸ್ಥಿತರಿದ್ದರು.
ಆರೋಗ್ಯ ಮಾತೆಯ ಆಶೀರ್ವಾದ ಪಡೆಯಲು ಸರ್ವ ಧರ್ಮದ ಭಕ್ತಾದಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಶಿರ್ವ ಪಿಎಸ್‌ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಪೊಲೀಸರು ಮತ್ತು ಸ್ವಯಂಸೇವಕರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದರು.
ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಸರ್ವ ಭಕ್ತಾದಿಗಳಿಗೆ ದೇವರ ಆಶೀರ್ವಾದ ಲಭಿಸಿ ಕೃತಾರ್ಥರಾಗಲೆಂದು ಕೋರುತ್ತೇನೆ. ಮಾತೆ ಮೇರಿಯ ಅನೇಕ ಪವಾಡಗಳು ಭಕ್ತರ ಕುಟುಂಬದಲ್ಲಿ ನಡೆದು ಭಕ್ತಾದಿಗಳಿಗೆ ರಕ್ಷಣೆ ಸಿಗಲಿ.
– ವಂ| ಡೆನ್ನಿಸ್ ಡೇಸಾ,
ಶಿರ್ವ ಚರ್ಚ್ ಧರ್ಮಗುರುಗಳು