ಶಿರ್ವ: ಏಸು ಸ್ವಾಮಿ ಜೆರುಸಲೆಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಪ್ರಪಂಚದಾದ್ಯಂತ ಕ್ರೈಸ್ತ ಸಮುದಾಯದವರು ಗರಿಗಳ ರವಿವಾರವನ್ನು ಆಚರಿಸುತ್ತಿದ್ದು, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಶಿರ್ವ ವಲಯದ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್ ಡೇಸಾ ನೇತೃತ್ವದಲ್ಲಿ ಪಾಮ್ ಸಂಡೆಯ ಬಲಿಪೂಜೆ ನೆರವೇರಿತು.
ಶಿರ್ವ ಸಂತ ಮೇರಿ ಪ.ಪೂ. ಕಾಲೇಜಿನ ಹಿಲಾರಿ ರಂಗಮಂಟಪದಲ್ಲಿ ರೆ|ಫಾ| ಡೆನ್ನಿಸ್ ಡೇಸಾ, ಸಹಾಯಕ ಧರ್ಮ ಗುರುಗಳಾದ ರೆ|ಫಾ| ರೋಲ್ವಿನ್ ಅರಾನ್ಹಾ ಮತ್ತು ರೆ|ಫಾ|ನೆಲ್ಸನ್ ಪೆರಿಸ್‌ಅವರು ಗರಿಗಳ ಆಶೀರ್ವಚನ ನೆರವೇರಿಸಿದ ಬಳಿಕ ಕ್ರೈಸ್ತ ಬಾಂಧವರು ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆಯ ಮೂಲಕ ಚರ್ಚ್‌ಗೆ ತೆರಳಿದರು. ಚರ್ಚ್ ಆರ್ಥಿಕ ಮಂಡಳಿಯ ಸದಸ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದು ಸುಮಾರು 1,500ಕ್ಕೂ ಹೆಚ್ಚು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ವಿಡಿಯೋ ಬ್ಲ್ಯಾಕ್‌ಮೇಲ್: ಕಬಾಬ್ ಕತೆ ಹೇಳಿ ಸಂಗತಿ ಮುಚ್ಚಿಟ್ಟ ಬಾಲಕಿ
ಚರ್ಚ್ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ, ಸದಸ್ಯರಾದ ಮೆಲ್ವಿನ್ ಅರಾನ್ಹಾ, ಜೂಲಿಯಾನ್ ರೊಡ್ರಿಗಸ್, ಮೆಲ್ವಿನ್ ಡಿಸೋಜಾ, ರೊನಾಲ್ಡ್ ಮೊರಾಸ್ ಮತ್ತಿತರರು ಉಪಸ್ಥಿತರಿದ್ದರು.