Advertisement

ಕೃಷ್ಣ ಮಠದ ಪಾರ್ಕಿಂಗ್‌ ನಿರ್ವಹಣೆ ಹೊಣೆ ಶೀರೂರು ಶ್ರೀಗೆ

12:08 PM Feb 02, 2018 | |

ಉಡುಪಿ: ಶ್ರೀಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದ ನಿರ್ವಹಣೆಯ ಹೊಣೆಯನ್ನು ಅಷ್ಟ ಮಠಾಧೀಶರ ಒಮ್ಮತದಂತೆ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ ವಹಿಸಲಾಯಿತು. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶೀರೂರು ಶ್ರೀಗಳ ಸಮ್ಮುಖ ಇತರ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಗುರುವಾರ ಪೇಜಾವರ ಮಠದ ವಿಜಯಧ್ವಜ ಕಟ್ಟಡದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

Advertisement

ಶ್ರೀಕೃಷ್ಣ ಮಠದ ಪರಿಸರ ಅಭಿವೃದ್ಧಿ ಟ್ರಸ್ಟ್‌ನ ವತಿಯಿಂದ ಪಾರ್ಕಿಂಗ್‌ ಪ್ರದೇಶ ಈ ಹಿಂದೆ ನಿರ್ವ ಹಣೆಯಾಗುತ್ತಿತ್ತು. ಇಲ್ಲಿನ ಯಾತ್ರಿ ನಿವಾಸ ಮತ್ತು ಅಂಗಡಿಗಳಿಂದ ಅವ್ಯವಸ್ಥೆ ಮತ್ತು ಅವ್ಯವಹಾರಗಳು ನಡೆಯುತ್ತಿವೆ ಎನ್ನುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಶೀರೂರು ಶ್ರೀಗಳು ಪಾರ್ಕಿಂಗ್‌ ಪ್ರದೇಶದಲ್ಲಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು.

ಅವ್ಯವಹಾರದ ದಾಖಲೆ ಬಹಿರಂಗ
ನಿಗದಿತ ಪಾರ್ಕಿಂಗ್‌ ಶುಲ್ಕಕ್ಕಿಂತ ಹೆಚ್ಚು ಶುಲ್ಕವನ್ನು ಯಾತ್ರಾರ್ಥಿಗಳಿಂದ ವಸೂಲಿ ಮಾಡಿರುವುದು, ಒಂದೇ ನಂಬರಿನ ಅನೇಕ ರಶೀದಿಗಳಿರುವ ದಾಖಲೆಗಳನ್ನು  ಶೀರೂರು ಶ್ರೀಗಳು ಸಭೆಯಲ್ಲಿ ತೋರಿಸಿದರು. ಪಾರ್ಕಿಂಗ್‌ ಪ್ರದೇಶದಲ್ಲಿ ನಡೆಯುತ್ತಿರುವ ದಬ್ಟಾಳಿಕೆಯನ್ನು ವಿವರಿಸಿದರು. ಇಂತಹ ಅನ್ಯಾಯಗಳನ್ನು ನಿಲ್ಲಿಸಿ ಟ್ರಸ್ಟಿಗೆ ನಷ್ಟವಾಗದಂತೆ ವ್ಯವಸ್ಥೆ ಮಾಡಬೇಕು. ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶೀರೂರು ಶ್ರೀಗಳು ಸಭೆಯಲ್ಲಿ ಆಗ್ರಹಿಸಿದರು. ಅದರಂತೆ ಶೀರೂರು ಶ್ರೀಗಳಿಗೆ ಜವಾಬ್ದಾರಿ ವಹಿಸುವ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.

ಪೇಜಾವರ ಶ್ರೀಗಳು ಮಾತನಾಡಿ, ಪಾರ್ಕಿಂಗ್‌ ಪ್ರದೇಶಕ್ಕೆ ಸಂಬಂಧಪಟ್ಟ ಎಲ್ಲ ವ್ಯವಸ್ಥೆ ಮತ್ತು ವ್ಯವಹಾರವನ್ನು ಶೀರೂರು ಶ್ರೀಗಳು ನೋಡಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲ ಮಠಾಧೀಶರ ಒಪ್ಪಿಗೆ ಇದೆ ಎಂದರು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯತೀರ್ಥ ಸ್ವಾಮೀಜಿಯವರು ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅವ್ಯವಹಾರ-ಮನವರಿಕೆ
ಪಾರ್ಕಿಂಗ್‌ ಶುಲ್ಕ ಸಂಗ್ರಹದಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಮನವರಿಕೆಯಾಗಿದೆ. ಪಾರ್ಕಿಂಗ್‌ ಪ್ರದೇಶಕ್ಕೆ ಸಂಬಂಧಪಟ್ಟ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಮಠದ ಸಹಾಯಕರು ಟ್ರಸ್ಟಿಗೆ ಹಣ ಪಾವತಿ ಮಾಡಿರಲಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೇಜಾವರ ಶ್ರೀಗಳು ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next