Advertisement

Shiruru hill collapse; ಕೊನೆಗೂ ಗ್ಯಾಸ್‌ ಟ್ಯಾಂಕರ್‌ ಖಾಲಿ ಮಾಡಿದ ಜಿಲ್ಲಾಡಳಿತ!

07:05 PM Jul 19, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತದ ರಭಸಕ್ಕೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಎಚ್‌.ಪಿ ಕಂಪನಿಯ ಗ್ಯಾಸ್‌ ಟ್ಯಾಂಕರ್‌ನಿಂದ ಸಂಪೂರ್ಣ ಗ್ಯಾಸ್‌ ಖಾಲಿ ಮಾಡಿ ಟ್ಯಾಂಕರ್‌ ಮೇಲಕ್ಕೆತ್ತುವ ಮೂಲಕ ಗ್ರಾಮದಲ್ಲಿನ ಜನರ ಆತಂಕ ಜಿಲ್ಲಾಡಳಿತ ದೂರ ಮಾಡಿದೆ.
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಮಂಗಳವಾರ ಭೀಕರ ಗುಡ್ಡ ಕುಸಿತ ನಡೆದಿತ್ತು. ಆ ಸಂದರ್ಭದಲ್ಲಿ ಅನೇಕ ವಾಹನಗಳು ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದವು.

Advertisement

ರಾಷ್ಟ್ರೀಯ ಹೆದ್ದಾರಿ ಮೇಲೆ ನಿಲ್ಲಿಸಿದ್ದ ಗ್ಯಾಸ್‌ ಟ್ಯಾಂಕರ್‌ ಕೂಡ ಮಣ್ಣಿನಲ್ಲಿ ಕೊಚ್ಚಿ ಗಂಗಾವಳಿ ನದಿಯಲ್ಲಿ ತೇಲಿ ಹೋಗುವ ಮೂಲಕ ಸುತ್ತಲಿನ ಜನತೆಯಲ್ಲಿ ಆತಂಕವನ್ನುಂಟು ಮಾಡಿತ್ತು. ಈ ಟ್ಯಾಂಕರ್‌ ಗಂಗಾವಳಿ ನದಿಯಿಂದ ಸುಮಾರು 6 ಕಿ.ಮೀವರೆಗೂ ಹೋಗಿ ಸಗಡಗೇರಿ ಬಳಿ ಲಂಗರೂ ಹಾಕಿತ್ತು. ಆ ಸಂದರ್ಭದಲ್ಲಿ ಗ್ಯಾಸ್‌ ಸೋರಿಕೆಯಾಗುತ್ತಿತ್ತು. ತಕ್ಷಣ ಕಂಪನಿ ಪರಿಣಿತರು ಆಗಮಿಸಿ ಗ್ಯಾಸ್‌ ಸೋರಿಕೆ ತಡೆಗಟ್ಟಿದ್ದರು. ಹಾಗೆಯೇ ಎನ್‌ಡಿಆರ್‌ಎಫ್‌ ತಂಡ ಗ್ಯಾಸ್‌ ಟ್ಯಾಂಕರ್‌ನ್ನು ಹಗ್ಗದಿಂದ ಕಟ್ಟಿ ಮತ್ತೆ ಮುಂದೆ ತೇಲಿ ಹೋಗದಂತೆ ನಿಲ್ಲಿಸಿದ್ದರು.

ಸೋರಿಕೆ ನಡುವೆಯೂ ಅನಿಲ ತುಂಬಿದ ಗ್ಯಾಸ್‌ ಟ್ಯಾಂಕರ್‌ ಸುರಕ್ಷಿತವಾಗಿ ಮೇಲೆತ್ತುವ ಕಾರ್ಯ ದುಸ್ಸಾಹಸ ಎನ್ನುವುದನ್ನು ಮನಗಂಡ ಜಿಲ್ಲಾ ಧಿಕಾರಿ ಲಕ್ಷ್ಮೀ ಪ್ರಿಯಾ ತಜ್ಞರನ್ನು ಕರೆಸಿ ಅಧ್ಯಯನ ನಡೆಸಿದ್ದರು. ತಜ್ಞರ ಸೂಚನೆ ಮೇರೆಗೆ ಗಂಗಾವಳಿ ನದಿಯಲ್ಲಿ ಅನಿಲ ಖಾಲಿ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು.

ಗುರುವಾರ ಬೆಳಗ್ಗೆ ನದಿ ದಡದಿಂದ 150 ಮೀ. ಹೊರಗಿದ್ದ ಟ್ಯಾಂಕರ್‌ನ್ನು ದಡಕ್ಕೆ ಎಳೆತಂದು ಟ್ಯಾಂಕರ್‌ನಲ್ಲಿದ್ದ ಗ್ಯಾಸ್‌ ನದಿಗೆ ಬಿಡುವ ಮೂಲಕ ಟ್ಯಾಂಕರ್‌ ಖಾಲಿ ಮಾಡಲು ಆರಂಭಿಸಿದ್ದರು. ಗುರುವಾರ ಸಂಜೆ ಹೊತ್ತಿಗೆ ಶೇ.40 ಗ್ಯಾಸ್‌ ಖಾಲಿ ಮಾಡಿ ಮತ್ತೆ ಶುಕ್ರವಾರವೂ ಕಾರ್ಯಾಚರಣೆ ಆರಂಭಿಸಿ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಗ್ಯಾಸ್‌ ಖಾಲಿ ಮಾಡಲಾಗಿದೆ.

Advertisement

ಗ್ಯಾಸ್‌ ಖಾಲಿಯಾದ ಬಳಿಕ ಟ್ಯಾಂಕರ್‌ನ್ನು ನೀರಿನಿಂದ ದಡದ ಮೇಲೆ ಕ್ರೇನ್‌ ಮೂಲಕ ಎಳೆದು ತರಲಾಯಿತು. ಈ ಮೂಲಕ ಎರಡು ದಿನ ಸಗಡಗೇರಿ ಉಳುವರೆ ಗ್ರಾಮದ ಜನರಲ್ಲಿದ್ದ ಭಯದ ವಾತಾವರಣ ತಿಳಿಗೊಳಿಸಿದರು. ಎರಡು ದಿನ ಮನೆ ಬಿಟ್ಟ ಜನರು ಕೊನೆಗೂ ಶುಕ್ರವಾರ ಸಂಜೆ ನಿಟ್ಟುಸಿರು ಬಿಟ್ಟು ತಮ್ಮ ಮನೆಗೆ ಸೇರಿಕೊಂಡರು. ಎರಡು ದಿನ ನಡೆದ ಗ್ಯಾಸ್‌ ಖಾಲಿ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ.

ಸ್ಥಳದಲ್ಲಿ ಕುಮಟಾ ಉಪ ವಿಭಾಗಾಧಿ ಕಾರಿ ಕಲ್ಯಾಣಿ ಕಾಂಬಳೆ, ತಾಪಂ ಇಒ ಸುನೀಲ್‌ ಎಂ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್‌, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌, ವೈದ್ಯಕೀಯ ತಂಡದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next