Advertisement

Shiruru Hill Collapse: ಗಂಗಾವಳಿ ನದಿಯಲ್ಲಿ ಲಾರಿ ಬಿಡಿ ಭಾಗಗಳು ಪತ್ತೆ

09:45 PM Aug 14, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳದ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಪುನಾರಂಭವಾದ ಬೆನ್ನಲ್ಲೇ ಬುಧವಾರ ಕಾರ್ಯಾಚರಣೆ ವೇಗ ಪಡೆದಿದ್ದು ಲಾರಿಯ ಮತ್ತೆರಡು ಬಿಡಿಭಾಗಗಳು ದೊರೆತಿದೆ.

Advertisement

ಬುಧವಾರ ದೊರೆತಿರುವ ಲಾರಿಗೆ ಅಳವಡಿಸುವ ಲಾಕ್‌ ಮತ್ತು ಕಬ್ಬಿಣದ ಶೀಟ್‌ ಬೆಂಜ್‌ ಲಾರಿ ಮಾಲಿಕ ಮುನಾಫ್‌ ತಮ್ಮ ಲಾರಿಯದ್ದಲ್ಲ, ಅದು ಟ್ಯಾಂಕರ್‌ ಲಾರಿಯದ್ದು ಎಂದು ಖಚಿತ ಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಲಾರಿಗೆ ಕಟ್ಟುವ ಎರಡು ಮೀಟರ್‌ನಷ್ಟು ಹಗ್ಗದ ತುಂಡು ಸಿಕ್ಕಿದೆ.

ಕಾರ್ಯಾಚರಣೆ ಬುಧವಾರ ಮುಂಜಾನೆ 8ರಿಂದ ಆರಂಭವಾಗಿದ್ದು ನೌಕಾದಳ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಜತೆಗೆ ಮಲ್ಪೆ ಈಶ್ವರ ತಂಡದಿಂದ ನದಿಯಲ್ಲಿ ಮುಳುಗಿ ಪತ್ತೆ ಕಾರ್ಯ ನಡೆದಿದೆ. ನೌಕಾದಳದ ಸಿಬ್ಬಂದಿ ತಮ್ಮ ಮುಳುಗು ಪರಿಣತರನ್ನು ಇಲ್ಲಿ ಕಾರ್ಯಾಚರಣೆಗೆ ಇಳಿಸಿದ್ದಾರೆ. ಈಶ್ವರ ಮಲ್ಪೆ ತಂಡದ ಮೂರು ಜನರು ಮುಳುಗು ಕಾರ್ಯಾಚರಣೆ ನಡೆಸಿದ್ದು, ಲಾರಿ ಮತ್ತು ಮೂವರ ಮೃತದೇಹದ ಕುರಿತಾಗಿ ಬಲವಾದಂತ ಯಾವುದೇ ಮಾಹಿತಿಗಳು ಕಾರ್ಯಾಚರಣೆ ವೇಳೆ ದೊರೆತಿಲ್ಲ.

ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್‌, ಕೇರಳದ ಮಂಜೇಶ್ವರ ಶಾಸಕ ಅಶ್ರಫ್‌, ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್‌ಪಿ ಎಂ.ನಾರಾಯಣ ಸ್ಥಳದಲ್ಲಿದ್ದು ಈಗ ನಡೆಯುತ್ತಿದ್ದ ಕಾರ್ಯಾಚರಣೆ ಯಶಸ್ವಿ ಹಾದಿ ಕಾಣದಿದ್ದರೆ ಮುಂದೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಚರ್ಚೆ ನಡೆಸಿದ್ದಾರೆ. ನದಿಯಲ್ಲಿರುವ ಮಣ್ಣನ್ನು ತೆರವು ಮಾಡಿ ಮೂವರ ಮೃತದೇಹವನ್ನು ಪತ್ತೆ ಮಾಡಲು ಈ ತಂಡ ಸಿದ್ಧತೆ ನಡೆಸುತ್ತಿದೆ.

ಘಟನೆಯಲ್ಲಿ 11 ಜನ ಮೃತಪಟ್ಟಿದ್ದು 8 ಜನರ ಮೃತದೇಹ ದೊರೆತಿದೆ. ಇನ್ನುಳಿದ ಮೂರು ಮೃತದೇಹಗಳಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಮತ್ತು ಕೇರಳದ ಅರ್ಜುನ ಪತ್ತೆ ಕಾರ್ಯ ಕಳೆದೊಂದು ತಿಂಗಳಿನಿಂದ ನಡೆದಿದೆ. ಭಾರೀ ಮಳೆ ಮತ್ತು ನೀರಿನ ಹರಿವು ಹೆಚ್ಚಿದ್ದರಿಂದ ಮಧ್ಯೆ ಕೆಲ ದಿನಗಳ ಕಾಲ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದ್ದು, ಮತ್ತೆ ಮಂಗಳವಾರದಿಂದ ಕಾರ್ಯಾಚರಣೆ ನಡೆದಿದೆ.

Advertisement

ಶಿರೂರು ಗುಡ್ಡ ಕುಸಿತ ಭಾಗದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ. ಮುಳುಗು ತಜ್ಞರು ತಮ್ಮ ಪ್ರಯತ್ನ ನಡೆಸಿದ್ದಾರೆ. ನೀರಿನಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕಲ್ಲುಗಳು ತುಂಬಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಅದನ್ನು ತೆರವು ಮಾಡಲು ಈಗಾಗಲೇ ಗೋವಾ ಸರ್ಕಾರ ಮತ್ತು ಅಲ್ಲಿಯ ಬಂದರು ಸಚಿವರೊಂದಿಗೆ ಡ್ರೆಜ್ಜರ್‌ ವ್ಯವಸ್ಥೆ ಕಲ್ಪಿಸಲು ಮಾತುಕತೆ ನಡೆಸಲಾಗಿದೆ, ಅವರು ಒಪ್ಪಿದ್ದಾರೆ. ಜಿಲ್ಲಾಧಿಕಾರಿಗಳು ಮನವಿ ಕಳುಹಿಸಿದ್ದಾರೆ. ಇನ್ನೆರಡು ದಿನದಲ್ಲಿ ಡ್ರೆಜ್ಜರ್‌ ಕಾರ್ಯಾಚರಣೆ ನಡೆಸಲಾಗುವುದು. ಆಗ ನೀರಿನಲ್ಲಿದ್ದ ಮಣ್ಣು ಕಲ್ಲು ಹೊರತೆಗೆದು ಮೃತದೇಹ ಪತ್ತೆ ಕಾರ್ಯ ನಡೆಸಲಾಗುವುದು.
– ಸತೀಶ ಸೈಲ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.