ಉಡುಪಿ:ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ನಿಧನರಾಗಿ ತಿಂಗಳು ಕಳೆದ ಹಿನ್ನೆಲೆಯಲ್ಲಿ ಶನಿವಾರ (ಆ.18) ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದ ಮಥುರಾ ಕಂಫರ್ಟ್ ನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದು ಶೀರೂರು ಶ್ರೀ ಅಭಿಮಾನಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಶನಿವಾರ ಮಧ್ಯಾಹ್ನ 2ಗಂಟೆಯಿಂದ 4ಗಂಟೆವರೆಗೆ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 4ರಿಂದ 5ಗಂಟೆವರೆಗೆ ಗಣ್ಯರ ಉಪಸ್ಥಿತಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ. 5ಗಂಟೆಗೆ ರಥಬೀದಿಯಲ್ಲಿ ಶ್ರೀಗಳ ಭಾವಚಿತ್ರದ ಬೃಹತ್ ಮೆರವಣಿಗೆ ನಡೆಯಲಿದೆ.
ಶ್ರದ್ಧಾಂಜಲಿ ಸಭೆಯಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶ ವಿಠಲ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಶ್ರೀ ಸಂತೋಷ್ ಗುರೂಜಿ, ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ ಸೇರಿದಂತೆ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ತನಿಖೆ ನಡೆಯಬೇಕು: ಮೂರು ಬಾರಿ ಪರ್ಯಾಯ ಪೀಠವನ್ನೇರಿ, ಸದಾಕಾಲ ಜನರ ಮಧ್ಯೆಯೇ ಇರುತ್ತಿದ್ದ ಶ್ರೀಗಳು ಜಾತಿ ಬೇಧ ಇಲ್ಲದೆ ಅವರು ಜನಾನುರಾಗಿಯಾಗಿದ್ದರು. ಅವರ ನಿಧನದಿಂದ ಅವರ ಭಕ್ತಾಭಿಮಾನಿಗಳಿಗೆಲ್ಲರಿಗೂ ಅನಾಥ ಪ್ರಜ್ಞೆ ಕಾಡುತ್ತಿದೆ. ಅವರು ಅಸಹಜ ರೀತಿಯಲ್ಲಿ ಮೃತಪಟ್ಟಿರುವುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ಈ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಮೂಲಕ ಶ್ರೀಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ನವೀನ್ ರಾವ್, ಉಪಾಧ್ಯಕ್ಷ ಜಯರಾಮ್ ಅಂಬೇಕಲ್ಲು, ಅಂಬಿಕಾ ನಾಯಕ್, ಸದಸ್ಯರಾದ ಸುನಿಲ್ ಬೈಲಕೆರೆ, ರಾಧಾಕೃಷ್ಣ ಮೆಂಡನ್, ರಾಮಾಂಜಿ ಉಪಸ್ಥಿತರಿದ್ದರು.