ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಶಿರಸಿ ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಗಣಪತಿ ನಾಯ್ಕ ಹಾಗೂ ಉಪಾಧ್ಯಕ್ಷೆಯಾಗಿ ವೀಣಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ನೀರಿಕ್ಷಿಸಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಪ್ರದೀಪ ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶಮೀನಾ ಬಾನು ನಾಮಪತ್ರ ಸಲ್ಲಿಸಿದ್ದರಿಂದ ಅನಿವಾರ್ಯವಾಗಿ ಚುನಾವಣೆ ನಡೆಯಿತು.
ನಂತರ ಕೈ ಎತ್ತುವುದರ ಮೂಲಕ ನಡೆದ ಚುನಾವಣೆಯಲ್ಲಿ ಗಣಪತಿ ನಾಯ್ಕ 18 ಮತ ಪಡೆದು ಪ್ರತಿಸ್ಪರ್ಧಿ ಪ್ರದೀಪ ಶೆಟ್ಟಿ ವಿರುದ್ಧ 10 ಮತಗಳ ಅಂತರದಿಂದ ವಿಜಯದ ಮಾಲೆ ಧರಿಸಿದರು. ವೀಣಾ ಶೆಟ್ಟಿಯವರಿಗೆ 18 ಹಾಗೂ ಪ್ರತಿಸ್ಪರ್ಧಿ ಶಮೀನಾ ಬಾನುಗೆ 10 ಮತಗಳು ಬಿದ್ದ ಪರಿಣಾಮ ವೀಣಾ ಶೆಟ್ಟಿ ಸುಲಭವಾಗಿ ಉಪಾಧ್ಯಕ್ಷ ಹುದ್ದೆ ಏರಿದರು. ಮೂವರು ಸದಸ್ಯರು ತಟಸ್ಥವಾಗಿದ್ದರು. ಇದರೊಂದಿಗೆ ಬಿಜೆಪಿ 2008ರ ನಂತರ ಮತ್ತೂಮ್ಮೆ ನಗರಸಭೆ ಚುಕ್ಕಾಣಿ ಹಿಡಿದಿದೆ. ಬೆಳಗ್ಗೆ 11ಕ್ಕೆ ಆರಂಭವಾದ ಚುನಾವಣೆ ಪ್ರಕ್ರಿಯೆ ಸುಮಾರು 4 ಗಂಟೆಗೆ ಪೂರ್ಣಗೊಂಡಿತು. ಚುನಾವಣಾ ಅಧಿಕಾರಿಯಾಗಿ ಎಸಿ ಆಕೃತಿ ಬನ್ಸಾಲ್ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ರಮೇಶ ನಾಯಕ್ ಹಾಗೂ ಕಾಂಗ್ರೆಸ್ ಸದಸ್ಯರು, ಬಿಜೆಪಿಗರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರಗಡೆ ಅಭಿನಂದಿಸಿದರು.
ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ: ನಗರದ ಮೂಲ ಸಮಸ್ಯಗಳ ನಿವಾರಣೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷ ಆಯ್ಕೆ ಗಣಪತಿ ನಾಯ್ಕ ತಿಳಿಸಿದರು. ನಗರದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಫಾರಂ ನಂಬರ ಮೂರು ಹೀಗೆ ಅನೇಕ ಜಲ್ವಂತ ಸಮಸ್ಯಗಳಿವೆ. ಇದನ್ನು ಎಲ್ಲಾ ನಗರಸಭೆ ಸದಸ್ಯರ ಸಹಕಾರದೊಂದಿಗೆ ಬಗೆಹರಿಸುವ ವಿಶ್ವಾಸವಿದೆ. ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಲು ಸಹಕರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಎಲ್ಲಾ ನಗರಸಭೆ ಸದಸ್ಯರಿಗೆ, ಕಾರ್ಯಕರ್ತರಿಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವೀಣಾ ಶೆಟ್ಟಿ, ನಾನು ಮೂರು ಬಾರಿ ಆಯ್ಕೆಯಾಗಿದ್ದರಿಂದ ನಗರ ಸಮಸ್ಯಗಳ ಬಗ್ಗೆ ಅರಿವಿದೆ. ಇದನ್ನು ಆದ್ಯತೆ ಮೆರೆಗೆ ಪರಿಹಾರ ಕಂಡು ಹಿಡಿಯಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.