ಶಿರಸಿ: ಸರ್ಕಾರಕ್ಕೆ ಪ್ರಸಕ್ತ ವರ್ಷ ಜನೆವರಿ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಒಕ್ಕಲೆಬ್ಬಿಸಿದವರ ಯಾದಿಗೆ ಆಗ್ರಹಿಸಿ ಮುನ್ಸೂಚನೆ ಪತ್ರ, ಪ್ರತಿಭಟನೆ ಈಗಾಗಲೇ ಜರುಗಿ ಸಾಕಷ್ಟು ಕಾಲಾವಕಾಶ ನೀಡಿದ್ದಾಗ್ಯೂ ಸಂಬಂಧಿಸಿದ ಅರಣ್ಯಾಧಿ ಕಾರಿಯಿಂದ ಸಮಂಜಸ ಉತ್ತರ ಬಾರದ ಹಿನ್ನೆಲೆಯಲ್ಲಿ ಶಿರಸಿ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಸರ್ಕಾರಕ್ಕೆ ಸಲ್ಲಿಸಿದ ಒಕ್ಕಲೆಬ್ಬಿಸಿದ ಯಾದಿ ನೀಡಲು ಆಗ್ರಹಿಸಿ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಮಾ.23 ರಂದು ಮುಖ್ಯ ಅರಣ್ಯಸಂರಕ್ಷಣಾಧಿ ಕಾರಿ ಕಚೇರಿಗೆ ಬೀಗ ಹಾಕಲಾಗುತ್ತದೆ ಎಂದು ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಶಿರಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಸರ್ಕಾರಕ್ಕೆ ಜನೆವರಿ ಅಂತ್ಯದವರೆಗೆ 5621 ಕುಟುಂಬಕ್ಕೆ ಸಂಬಂಧಿಸಿದ 3159.35 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಅತಿಕ್ರಮಣದಾರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೋರಾಟ ವೇದಿಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸ್ಥಳೀಯ ಉಪ ವಿಭಾಗಾಧಿಕಾರಿ ಹಾಗೂ ಉಪ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದು ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಫೆ. 23 ಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಕಚೇರಿಗೆ ಸಹಸ್ರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅತೀ ಶೀಘ್ರದಲ್ಲಿ ದಾಖಲೆಗಳನ್ನು ಒದಗಿಸಲಾಗುವುದು ಎಂದು ಲಿಖೀತ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುತ್ತಿಗೆ ಕಾರ್ಯಕ್ರಮ ಹಿಂದಕ್ಕೆ ಪಡೆಯಲಾಗಿತ್ತು.
ಲಿಖಿತ ಭರವಸೆ ನೀಡಿ 3 ವಾರಗಳಾದರೂ ಜನೆವರಿ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದ ಪ್ರದೇಶ, ಕುಟುಂಬದವರ ಹೆಸರು, ದಿನಾಂಕ ಸಹಿತ ನೀಡದೇ ಇರುವ ಹಿನ್ನೆಲೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬೀಗ ಜಡಿಯುವುದು. ಅನಿವಾರ್ಯವಾಗಿದೆ ಎಂದು ವಿವರಿಸಿದ್ದಾರೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸರ್ಕಾರಕ್ಕೆ ಜನೆವರಿ ಅಂತ್ಯದವರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ಒಕ್ಕಲೆಬ್ಬಿಸಿದ ಕುಟುಂಬಗಳನ್ನು ಪರಿಶೀಲಿಸಿದರೆ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವಲಯದಲ್ಲಿ 1573 ಕುಟುಂಬ (614.41 ಹೆಕ್ಟೇರ್), ಯಲ್ಲಾಪುರ 733 ಕುಟುಂಬ (1309.18 ಹೆಕ್ಟೇರ್), ಹಳಿಯಾಳ 366 ಕುಟುಂಬ (313.12 ಹೆಕ್ಟೇರ್), ಹೊನ್ನಾವರ 2765 ಕುಟುಂಬ (905.58 ಹೆಕ್ಟೇರ್) ಕಾರವಾರ 179 ಕುಟುಂಬ (16.95 ಹೆಕ್ಟೇರ್) ವನ್ಯಧಾಮ ದಾಂಡೇಲಿ 5 ಕುಟುಂಬ (0.11 ಹೆಕ್ಟೇರ್) ಪ್ರದೇಶವನ್ನು ಹೊರಹಾಕಿ ಒಕ್ಕಲೆಬ್ಬಿಸಿದ್ದೇವೆ ಅಂತಾ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪವಾಗಿರುವುದು ಉಲ್ಲೇಖನಾರ್ಹ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.