ಶಿರಸಿ: ಕರಾವಳಿ ಮತ್ತು ಮಲೆನಾಡು ಸಂಪರ್ಕ ಬೆಸೆಯುವ ಅಣಶಿ, ಅರೇಬೈಲ್ ಹೆದ್ದಾರಿಗಳು ಅತಿಯಾದ ಮಳೆಗೆ ಧರೆ ಕುಸಿದು ಬಂದ್ ಆಗಿದೆ. ಈಗ ಶಿರಸಿ ಮಾರ್ಗವಾಗಿ ಉತ್ತರ ಕರ್ನಾಟಕ ಹಾಗೂ ಕರಾವಳಿ ತಲುಪಲು ಎರಡು ಮಾರ್ಗಗಳಿವೆ. ಒಂದು ಹೊನ್ನಾವರ ಗೇರುಸೊಪ್ಪ ಮೂಲಕ ಶಿರಸಿ ಹಾಗೂ ಕುಮಟಾ ದೇವಿಮನೆ ಮೂಲಕ ಶಿರಸಿ ಮಾರ್ಗ. ಈ ಮಾರ್ಗಗಳಲ್ಲಿ ನಿಮಿಷಕ್ಕೊಂದು ಟ್ರಕ್, ಗ್ಯಾಸ್ ಟ್ಯಾಂಕರ್ ಓಡುತ್ತಿದೆ. ಭಾರವಾದ ಸಾಮಗ್ರಿ ತುಂಬಿಕೊಂಡು ಬರುತ್ತಿವೆ.
ಇದನ್ನೂ ಓದಿ: ರಾಜೀನಾಮೆ ಹಿಂದೆ ಪಿತೂರಿ:ಅಂದು ಬಸವಣ್ಣ ಇಂದು BSY:ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಬೇಸರ
ಈ ಪೈಕಿ ಶಿರಸಿ ಸಿದ್ದಾಪುರ ಗೇರಸೊಪ್ಪ ಮಾರ್ಗದಲ್ಲಿ ಕಾನಸೂರು ಬಳಿ ಧರೆ ಕುಸಿತ ಆಗಿದೆ. ಇನ್ನು ಶಿರಸಿ ಕುಮಟಾ ಮಾರ್ಗದಲ್ಲಿ ಅಮ್ಮೀನಳ್ಳಿಯಿಂದ ಶಿರಸಿ ಸಮೀಪದ ಹೆಗಡೆಕಟ್ಟ ಕತ್ರಿ ತನಕ ರಸ್ತೆ ಅಭಿವೃದ್ದಿ ನಡೆಯುತ್ತಿದ್ದು, ಕಾಮಗಾರಿ ಮಳೆಗಾಲದಿಂದ ನಿಂತಿದೆ. ಈ ರಸ್ತೆ ಸಂಪೂರ್ಣ ಹೊಂಡಾಗುಂಡಿ ಆಗಿದ್ದು ಶಿರಸಿಗೆ ೫೦ ಕಿಮಿ ದೂರದ ಕುಮಟಾದಿಂದ ಬರಲು ಮೊದಲು ಒಂದುಕಾಲು ಗಂಟೆ ಬೇಕಿತ್ತು. ಈಗ ಬರೋಬ್ಬರಿ ೫ ತಾಸು ಬೇಕಾಗಿದೆ. ಸುರಕ್ಷಿತ ಪ್ರಯಾಣವೂ ಗಗನ ಕುಸುಮವೇ ಆಗಿದೆ.
ಅಮ್ಮಿನಳ್ಳಿ, ರಾಗಿಹೊಸಳ್ಳಿ ಸೇತುವೆ ಕೂಡ ಭದ್ರವಾಗಿಲ್ಲ. ಭಾರ ವಾಹನಗಳು ಈಗ ಹದಗೆಟ್ಟ ರಸ್ತೆಯಲ್ಲಿಅಂತೂ ಇಂತೂ ಆಮೆ ನಡಿಗೆ ಮಾಡಿವೆ. 50-60 ಟ್ರಕ್ ಗಳು ದೇವಿಮನೆ ಘಟ್ಟದಿಂದ ಹಲವಡೆ ನಿಂತಿವೆ. ಉಬ್ಬಸ ತೆಗೆಯುತ್ತ ಬರುವ ವಾಹನಗಳ ಎದುರು ಸಣ್ಣಪುಟ್ಟ ಬೈಕ್ ಸವಾರರು ಹೋಗುವುದು ಅಪಾಯವೇ ಆಗಿದೆ. ಕೆಲವು ವಾಹನಗಳಿಗೆ ಹೆಗಡೆಕಟ್ಟಮಾರ್ಗ ಸೂಚಿಸಿದ್ದರೂ ಅಲ್ಲೂ ಒತ್ತಡ ಹೆಚ್ಚಾಗುತ್ತಿವೆ.