Advertisement

ಶಿರಸಿ ಜಾತ್ರೆ: ಅಮ್ಮನ ದರ್ಶನಕ್ಕೆ ಮೊದಲ ದಿನವೇ ಭಕ್ತರ ದಂಡು

12:07 PM Mar 22, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ಭಕ್ತರ ಜಯಘೋಷದ ಮಧ್ಯೆ ಬುಧವಾರ ಬಿಡಕಿಬಯಲಿನ ಗದ್ದುಗೆಯಲ್ಲಿ ವಿರಾಜಮಾನಳಾದ ಶ್ರೀ ಮಾರಿಂಕಾಬೆ ದರ್ಶನಕ್ಕೆ ಗುರುವಾರ ಬೆಳಗ್ಗೆಯಿಂದ ಭಕ್ತರ ದಂಡು ಬರುತ್ತಿದೆ. ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇಶಿ ದರ್ಶನ ಪಡೆದು ಪೂಜೆ, ಹಣ್ಣುಕಾಯಿ, ಉಡಿ ಸೇರಿದಂತೆ ವಿವಿಧ ಸೇವೆ ಸಲ್ಲಿಸಿದರು.

Advertisement

ಮುಂಜಾನೆ 3 ಗಂಟೆಗೇ ಸುತ್ತಲಿನ ಭಕ್ತರು, ಪ್ರಥಮ ದಿನದ ಸೇವೆ ಸಲ್ಲಿಸಿ ಕೃತಾರ್ಥರಾಗಲು ಸರತಿಯಲ್ಲಿ ನಿಂತಿದ್ದರು. ಐದು ಗಂಟೆಗೆ ದೇವಿ ತವರು ಮನೆಯವರು ಎಂದು ಗುರುತಾದ ನಾಡಿಗ ಮನೆತನದ ವಿಜಯ ನಾಡಿಗರು ಆಗಮಿಸಿ ಪ್ರಥಮ ಮಂಗಳಾರತಿ ಬೆಳಗಿದರು. ಬಳಿಕ ಸಾರ್ವಜನಿಕ ಸೇವೆ ಆರಂಭವಾದವು. ಭಟ್ಕಳದ ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಪುಷ್ಪಗಳನ್ನು ಮುಡಿದು ಸರ್ವಾಲಂಕಾರ ಭೂಷಿತಳಾದ ತಾಯಿಯನ್ನು ಭಕ್ತರು ಕಣ್ತುಂಬಿಕೊಂಡರು.

ಹಣ್ಣು ಕಾಯಿ, ಉಡಿ, ಸೀರೆಗಳ ಸೇವೆ ಸಲ್ಲಿಸಿದರು. ಅನೇಕರು ಮರ್ಕಿ ದುರ್ಗಿ ದೇವಸ್ಥಾನದಿಂದ ಬಂದು ಇಲ್ಲಿ ಗದ್ದುಗೆ ಸುತ್ತುವರಿದು ಬೇವಿನ ಉಡಿ ಹರಕೆ ಸಲ್ಲಿಸಿದರು. ಭಕ್ತರು ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆದರೆ, ಕೆಲವರು ತಮ್ಮ ಮಕ್ಕಳನ್ನು ಎತ್ತಿ ಹಿಡಿದು ದೇವಿ ದರ್ಶನ ಮಾಡಿಸಿದರು.

ಶಾಸಕ ಭೀಮಣ್ಣ ನಾಯ್ಕ, ಪತ್ನಿ ಗೀತಾ ನಾಯ್ಕ, ಪುತ್ರ ಅಶ್ವಿ‌ನ್‌ ಸೇರಿದಂತೆ ಸಕುಟುಂಬ ಸಹಿತ ಅಮ್ಮನ ದರ್ಶನ ಪಡೆದು ಕಾಯಿ ಹಾಗೂ ಅಡಿಕೆಯ ತುಲಾಭಾರ ನಡೆಸಿದರು. ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಕೂಡ ದೇವಿ ದರ್ಶನ ಪಡೆದರು.

ವಿವಿಧ ಉಚಿತ ಸೇವೆ: ಈ ಮಧ್ಯೆ ಬಿಸಿಲಿನ ಝಳ  ಹೆಚ್ಚಿದ್ದು ಎಸಿಸಿ ಸಿಮೆಂಟ್‌ ನಿಂದ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದ ಉಚಿತ ಮಜ್ಜಿಗೆ ಸೇವೆ ನೀಡಲಾಯಿತು. ದೇವಸ್ಥಾನದಿಂದ ಭಕ್ತರಿಗೆ ಪಾನಕ ವಿತರಿಸಲಾಯಿತು. ಕೆನರಾ ಬಾರ್‌ ಬೆಂಡಿಗ್‌ ಸೆಂಟ್ರಿಂಗ್‌ ಅಸೋಸಿಯೇಶನ್‌ ತಂಡದಿಂದ ಮಹಿಳೆಯರಿಗಾಗಿ ಉಚಿತವಾಗಿ ವಿಶ್ರಾಂತಿ ಕೋಣೆ ತೆರೆದು ಕುಡಿಯಲು ನೀರು ಒದಗಿಸಲಾಯಿತು.

Advertisement

ನಗರದ ಉಣ್ಣೇಮಠ ಗಲ್ಲಿಯಲ್ಲಿ ಶ್ರೀಅನ್ನಪೂರ್ಣೇಶ್ವರಿ ಟ್ರಸ್ಟ್‌ ನಿಂದ ಅನ್ನದಾನ ಸೇವೆ ಆರಂಭಿಸಲಾಯಿತು. ಮಾ.26 ರ
ತನಕ ನಿತ್ಯ ಅನ್ನದಾನ ಸೇವೆ ನಡೆಯಲಿದ್ದು, ಟ್ರಸ್ಟನ ಸಚಿನ್‌ ಕೋಡಕಣಿ, ಶ್ರೀಪತಿ ನಾಯ್ಕ, ಸತೀಶ ನಾಯ್ಕ ಮಧುರವಳ್ಳಿ, ದಿನೇಶ ನಾಯ್ಕ, ರಾಜೇಶ ಚಾವಡಿ, ರಾಜೇಶ ಮೈದುರ್ಗಿಮಠ, ಉದಯ ಶೆಟ್ಟಿ, ಕೇಶವ ಪಾಕೇಕರ್‌, ಕಿರಣ ಮಡಿವಾಳ ಇದ್ದರು. ಸುಮಾರು 4 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಮಾಡಿದರು. ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಮಾರಿಗುಡಿ ಹಿಂಭಾಗದಲ್ಲಿ ದೇವಸ್ಥಾನದಿಂದ ಅನ್ನದಾನ ಸೇವೆ ಕೂಡ ನಡೆಯಿತು.

ಮಾರಿ ದರ್ಶನ ಪಡೆದ ಕೋಣ


ಬುಧವಾರ ರಾತ್ರಿಯಿಂದಲೇ ಜಾತ್ರೆಗೆ ರಂಗು ಏರಿದ್ದು, ದೀಪಾಲಂಕಾರದಿಂದ ಗದ್ದುಗೆಯ ಮುಖ ಮಂಟಪ ಗಮನ ಸೆಳೆಯುತ್ತಿದೆ. ಬುಧವಾರ ರಾತ್ರಿ ಗದ್ದುಗೆ ಏರಿದ ಮಾರಿಕಾಂಬಾ ದೇವಿಯನ್ನು ವರನಾದ ಪಾಂಡ್ಯ ಕೋಣವನ್ನು ತಂದು ದೇವಿ ದರ್ಶನ
ಮಾಡಿಸಲಾಯಿತು. ಪ್ರಥಮ ಬೇವಿನ ಉಡಿ ಸೇವೆ ಕೂಡ ನಡೆಯಿತು. ನಾಲ್ಕು ದಿಕ್ಕಿನಲ್ಲಿ ಹುಲುಸು ಚೆಲ್ಲಿ ಬರುವ ಶಾಸ್ತ್ರ ಕೂಡ ಗದ್ದುಗೆಯ ಹಿಂಭಾಗದಲ್ಲಿ ನಡೆಯಿತು. ಶುಕ್ರವಾರ ಬೆಳಿಗ್ಗೆ 5 ರಿಂದ ಮತ್ತೆ ಸೇವೆ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next