ಶಿರಸಿ: ಇನ್ನು ಮೂರೇ ದಿನಗಳಲ್ಲಿ ಶಿರಸೀಲಿ ಫಲ ಪುಷ್ಪಗಳದ್ದೇ ಹವಾ. ಏಕೆಂದರೆ, ಹನ್ನೊಂದನೇ ವರ್ಷದ ಫಲ ಪುಷ್ಪ ಪ್ರದರ್ಶನ ಹಾಗೂ ಕಿಸಾನ್ ಮೇಳ ಫೆ.2 ರಿಂದ ಮೂರು ದಿನ ಇಲ್ಲಿನ ತೋಟಗಾರಿಕಾ ಇಲಾಖೆ ಆವಾರದಲ್ಲಿ ಏರ್ಪಡಿಸಲಾಗಿದೆ.
ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಆತ್ಮ ಯೋಜನೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಕಾರದಲ್ಲಿ ನಡೆಯುವ ಫಲಪುಷ್ಪ ಮೇಳದಲ್ಲಿ ಆಕರ್ಷಕ ಪುಷ್ಪ ಸಂತೆ, ತರಕಾರಿ ಬೇಸಾಯ, ಉಪನ್ಯಾಸ, ಜಿಲ್ಲೆಯ ತೋಟಗಾರಿಕಾ ಬೆಳೆಗಳ ಪ್ರದರ್ಶನ, ಸ್ಪರ್ಧೆ ನಡೆಯಲಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದೆರಡು ತಿಂಗಳಿಂದ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ 19 ಅಡಿ ಎತ್ತರದ ಪುಷ್ಪ ಮಂಟಪ, ಆಕರ್ಷಕ ಪುಷ್ಪ ರಂಗೋಲಿ, ಹೂವಿನಿಂದಲೇ ತಯಾರು ಮಾಡಿದ ಡ್ರಾಗನ್ ಫ್ಲೈ, ಕುಂಬಳಕಾಯಿ ಹುಳ, ಚಿಟ್ಟೆ, ಫಿರಂಗಿ, ಬನವಾಸಿಯ ಎರಡು ಆನೆಗಳು, ಬುಟ್ಟಿಯಲ್ಲಿರುವ ನಾಯಿ ಮರಿ ಅರಳಲಿವೆ. ತರಕಾರಿ ಬೆಳೆಗಳಾದ ಬದನೆ, ಹೂಕೋಸು, ಖಾಲಿ ಪ್ಲವರ್, ಟೊಮೇಟೋ, ಮೆಣಸು, ಮೂಲಂಗಿ, ಕಲ್ಲಂಗಡಿ ಸೇರಿದಂತೆ ವೈವಿಧ್ಯಮಯ ಬೆಳೆಗಳ ವೃತ್ತ ಸಿದ್ಧಗೊಳಿಸಲಾಗಿದೆ. ಇರಿಗೇಶನ್ ಸಹಿತ ನೂತನ ಮಾದರಿಯಲ್ಲಿ ಮನೆಯಲ್ಲೂ ತರಕಾರಿ ಬೆಳೆಸಲು ಪ್ರೋತ್ಸಾಹ ಆಗುವ ನಿಟ್ಟಿನಲ್ಲಿ ಬೇಸಾಯ ಮಾಡಲಾಗಿದೆ. ತೆಂಗಿನಕಾಯಿ ಕರಟದ ಆಗೃತಿಗಳ ಪ್ರದರ್ಶನವೂ ಇದೆ. ಜಾಗನಳ್ಳಿಯ ಕಲಾ ತಂಡ ಆಕರ್ಷಕ ಪುಷ್ಪ ಮಂಟಪ ಸಿದ್ದಗೊಳಿಸುತ್ತಿದೆ ಎಂದು ತಿಳಿಸಿದರು.
ಎಂಟ್ರಿನಮ್, ಟೊರಿನೋಯಾ, ಪೆಟೂನಿಯಾ, ಜಿರಾನಿಯಂ, ಪೆಂಟಾಸ್ ಸೇರಿದಂತೆ 32 ಜಾತಿ ಪುಷ್ಪಗಳು ಇಲ್ಲಿ ಅನಾವರಣವಾಗಲಿದೆ. ಗುಲಾಬಿಯಲ್ಲೂ ಹತ್ತಾರು ಬಗೆಯವು ಇಲ್ಲಿವೆ. ಸೇವಂತಿಗೆಯಲ್ಲಿ ಶಿರಸಿ ತಾಲೂಕಿನಲ್ಲೇ ಬೇಸಾಯ ಮಾಡಿದ ಇಬ್ಬರು ರೈತರಿಂದ ಖರೀದಿಸಲಾಗುತ್ತಿದೆ. ಉಳಿದ ಕಡೆ ಬೆಂಗಳೂರು ಸಹಿತ ರೈತರಿಂದಲೇ ಪುಷ್ಪ ಖರೀದಿಸಲಾಗುತ್ತಿದೆ. ಇಲಾಖೆಯಿದ 6 ಲಕ್ಷ ರೂ. ಅನುದಾನ, ಆತ್ಮ ಯೋಜನೆಯಿಂದ ಎರಡೂವರೆ ಲಕ್ಷ ರೂ. ಅನುದಾನ ಸಿಕ್ಕಿದ್ದು, 13 ಲಕ್ಷ ರೂ. ಖರ್ಚು ಬರುವ ನಿರೀಕ್ಷೆ ಇದೆ ಎಂದ ಅವರು, ಫೆ.2ರ ಬೆಳಗ್ಗೆ 8ರಿಂದ ಪುಷ್ಪ ರಂಗೋಲಿ ಸ್ಪರ್ಧೆ, ಫೆ.3ರ ಬೆಳಗ್ಗೆ 10:30ರಿಂದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ತರಕಾರಿ ಬೇಸಾಯ ಕೂಡ ನಡೆಯಲಿದೆ. ಹನ್ನೊಂದು ತಾಲೂಕುಗಳ ಹನ್ನೊಂದು ಬೆಳೆಗಳ ಅನಾವರಣ ಕೂಡ ಇಲ್ಲಾಗಲಿದೆ ಎಂದೂ ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಫೆ.2ರ ಮಧ್ಯಾಹ್ನ 12ಕ್ಕೆ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಟಾರ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ಬಸವರಾಜ ಹೊರಟ್ಟಿ, ಶ್ರೀಕಾಂತ ಘೋಕ್ಲೃಕರ್, ಜಿಪಂ ಅಧ್ಯಕ್ಷ ಜಯಶ್ರೀ ಮೊಗೇರ ಇತರರು ಪಾಲ್ಗೊಳ್ಳುವರು.
ತೋಟಗಾರಿಕಾ ಅಧಿಕಾರಿ ಗಣೇಶ ಹೆಗಡೆ, ಕೃಷಿ ಅಧಿಕಾರಿ ವಸಂತ ಬೆಳಗಾಂವಕರ್, ಕೃಷಿ ವಿಜ್ಞಾನಿ ಎಂ.ಎಸ್.ಮಂಜು ಇತರರು ಇದ್ದರು.