Advertisement

ಸ್ಪರ್ಧೆಯಿಂದ ಪ್ರತಿಭೆ ಬೆಳಕಿಗೆ

11:37 AM Feb 11, 2019 | Team Udayavani |

ಶಿರಸಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ಸ್ಪರ್ಧೆಗಳು ಪೂರಕವಾಗಿವೆ. ಅಲ್ಲದೇ ಪ್ರತಿಯೊಬ್ಬರೂ ತಮ್ಮ ಅಭಿರುಚಿಗೆ ತಕ್ಕಂತೆ ತರಬೇತಿ ಪಡೆದು ಮುಂದುವರಿಯಲು ಸಹಾಯಕವಾಗಿದೆ ಎಂದು ಜಿ.ಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಹೇಳಿದರು.

Advertisement

ಅವರು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ನಡೆದ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಮಕ್ಕಳ ಆಯ್ಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮುಗ್ಧ ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಯಾವ ಮಗುವಿನಲ್ಲಿ ಯಾವ ಪ್ರತಿಭೆ ಅಡಗಿದಯೋ ತಿಳಿಯುವುದಿಲ್ಲ ಎಂದರು. ಪ್ರಾಸ್ತಾವಿಕ ಮಾತನಾಡಿದ ಕುಮಟಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತ್ರಿವೇಣಿ ಯಾಜಿ, ಮಕ್ಕಳು ಅತಿ ಹೆಚ್ಚು ಅಂಕಗಳಿಸುವ ಉದ್ದೇಶದೊಂದಿಗೆ ಕೇವಲ ಪುಸ್ತಕ ಅಭ್ಯಾಸವೊಂದರಲ್ಲೇ ತಲ್ಲೀನರಾಗದೇ ಕಲೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ. ದೈಹಿಕ ಆರೋಗ್ಯಕ್ಕಾಗಿ ವಿವಿಧ ಆಹಾರಗಳನ್ನು, ಹಣ್ಣು ಹಂಪಲು ಹಾಗೂ ತರಕಾರಿಗಳನ್ನು ಸೇವಿಸುವಂತೆ ಮಾನಸಿಕ ಬೆಳವಣಿಗೆ ಹೊಂದಲು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಬೇಕು. ಮಕ್ಕಳು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ತರಬೇತಿ ಅಥವಾ ಮಾರ್ಗದರ್ಶನ ಪಡೆಯಬೇಕಾಗುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವಿಜಯಾ ನಾಯ್ಕ, ಲೀಲಾವತಿ ಭಟ್ಟ, ಸುಧಾ ಹೆಗಡೆ, ಹಾಗೂ ಸ್ಪರ್ಧಾ ನಿರ್ಣಾಯಕರಾದ ಕಿರಣ ಪ್ರಭು ಮತ್ತು ನಿರ್ಮಲಾ ಪ್ರಭು ಉಪಸ್ಥಿತರಿದ್ದರು.

ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕುಮಟಾ ಹಾಗೂ ಅರುಣೋದಯ ಸಂಸ್ಥೆ ಶಿರಸಿ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿಗೆ ಕುಮಟಾ ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಲು 9 ರಿಂದ 16 ವರ್ಷದ ಮಕ್ಕಳಿಗಾಗಿ ಕಥೆ, ಕವನ, ಪ್ರಬಂಧ, ಏಕಪಾತ್ರಾಭಿನಯ ಹಾಗೂ ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ವಿಜ್ಞಾನ ಮಾದರಿ ಪ್ರದರ್ಶನ ಮುಂತಾದ ಸ್ಪರ್ಧೆಗಳು ನಡೆದವು.

ಚಿತ್ರಕಲೆ, ಕರಕುಶಲ ಕಲೆ, ಹಾಗೂ ಜೇಡಿ ಮಣ್ಣಿನ ಕಲೆ ಸ್ಪರ್ಧೆಯಲ್ಲಿ ಶ್ರೀರಾಮ ಶಾನಭಾಗ ಪ್ರಥಮ, ವಿನುತಾ ಹೆಗಡೆ ದ್ವಿತೀಯ, ಏಕಪಾತ್ರಾಭಿನಯದಲ್ಲಿ ಶುಭಾ ಹೆಗಡೆ ಪ್ರಥಮ, ಅಂಕಿತಾ ಹೊಸಕಟ್ಟಾ ದ್ವಿತೀಯ, ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಗತಿ ಹೆಗಡೆ ಪ್ರಥಮ, ಶಿಲ್ಪಾ ಭಟ್ಟ ದ್ವಿತೀಯ, ವಿಜ್ಞಾನ ಪ್ರದರ್ಶನದಲ್ಲಿ ವೆಂಕಟೇಶ ಪಟಗಾರ ಪ್ರಥಮ, ಕಾರ್ತೀಕ ಶುಕ್ಲಾ ದ್ವಿತೀಯ ಸ್ಥಾನ ಪಡೆದರು. ಶಿರಸಿ ಅರುಣೋದಯ ಸಂಸ್ಥೆ ಮುಖ್ಯಸ್ಥ ಸತೀಶ ನಾಯ್ಕ ಸ್ವಾಗತಿಸಿದರು. ಚಂದ್ರಕಾಂತ ಪವಾರ ನಿರ್ವಹಿಸಿದರು. ಸವಿತಾ ಮುಂಡೂರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next