Advertisement

Shiradi-Sampaje ಘಾಟಿ ಬಂದ್‌: KSRTC ಶೇ.50ರಷ್ಟು ಪ್ರೀಮಿಯಂ ಬಸ್‌ ಸೇವೆ ಸ್ಥಗಿತ

01:41 AM Jul 21, 2024 | Team Udayavani |

ಮಂಗಳೂರು: ಶಿರಾಡಿ-ಸಂಪಾಜೆ ಘಾಟಿಯಲ್ಲಿ ಭೂ ಕುಸಿತದ ಪರಿಣಾಮ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಹೊರಡುವ ಶೇ.50ರಷ್ಟು ಪ್ರೀಮಿಯಂ ಬಸ್‌ ಸಂಚಾರ ರದ್ದುಗೊಂಡಿದೆ.

Advertisement

ಕೆಎಸ್ಸಾರ್ಟಿಸಿ ವಿಭಾಗದಿಂದ ಹೊರಡುವ ನಾನ್‌ ಎಸಿ ಸ್ಲಿàಪರ್‌, ರಾಜಹಂಸ, ಸಾಮಾನ್ಯ ಸಾರಿಗೆ ಬಸ್‌ಗಳು ಚಾರ್ಮಾಡಿ ಮೂಲಕ ಸಂಚರಿಸುತ್ತದೆ. ಆದರೆ, ಕೆಎಸ್ಸಾರ್ಟಿಸಿ ಪ್ರೀಮಿಯಂ ಬಸ್‌ಗಳಾದ ಅಂಬಾರಿ ಉತ್ಸವ, ವೋಲ್ವೋ ಮಲ್ಟಿ ಆ್ಯಕ್ಸೆಲ್‌, ಡ್ರೀಮ್‌ಕ್ಲಾಸ್‌ ಸ್ಲಿàಪರ್‌ ಮಾದರಿಯ ಬಸ್‌ಗಳು ಚಾರ್ಮಾಡಿ ಘಾಟ್‌ ರಸ್ತೆಯ ಗುಣಮಟ್ಟಕ್ಕೆ ಆಧರಿಸಿ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶಿರಾಡಿ ಮಾರ್ಗವೊಂದೇ ಸಂಚಾರಕ್ಕೆ ಸೂಕ್ತ. ವಿಭಾಗದಿಂದ ಪ್ರತಿದಿನ ರಾತ್ರಿ ಹೊರಡುವ 40 ಪ್ರೀಮಿಯಂ ಬಸ್‌ಗಳ ಪೈಕಿ ಸುಮಾರು 20 ಬಸ್‌ ಮಾತ್ರ ಸದ್ಯ ಶಿರಾಡಿ ಮೂಲಕವೇ ಕಾರ್ಯಾಚರಿಸುತ್ತಿದೆ. ಉಳಿದ ಬಸ್‌ ಸಂಚಾರ ರದ್ದಾಗಿದೆ. ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಯಾವುದೇ ಪ್ರೀಮಿಯಂ ಬಸ್‌ ಸೇವೆ ಇರದ ಕಾರಣ ಯಾವುದೇ ಸಮಸ್ಯೆ ಇಲ್ಲ.

3 ಗಂಟೆ ಘಾಟಿಯಲ್ಲೇ ಬಾಕಿ
ಮಂಗಳೂರಿನಿಂದ ರಾತ್ರಿ ಸುಮಾರು 10.30, 11 ಗಂಟೆಗೆ ಹೊರಡುವ ಪ್ರೀಮಿಯಂ ಬಸ್‌ಗಳು ನಸುಕಿನ ಜಾವ ಸುಮಾರು 2ರಿಂದ 3 ಗಂಟೆ ವೇಳೆಗೆ ಶಿರಾಡಿಗೆ ತಲುಪುತ್ತದೆ. ಬೆಳಗ್ಗೆ 6 ಗಂಟೆ ಬಳಿಕ ವಾಹನ ಸಂಚಾರ ಆರಂಭವಾಗುವ ಕಾರಣ ಪ್ರಯಾಣಿಕರು 3 ಗಂಟೆಗಳ ಕಾಲ ಶಿರಾಡಿಯಲ್ಲಿ ಬಸ್‌ನಲ್ಲೇ ಕಾಲ ಕಳೆಯಬೇಕು. ಬೆಳಗ್ಗೆ 6 ಗಂಟೆಗೆ ಹೊರಟ ಬಸ್‌ ಬೆಂಗಳೂರಿಗೆ ತಲುಪುವಾಗ 11 ಗಂಟೆ ಸಮೀಪಿಸುತ್ತದೆ. ಇದೇ ಕಾರಣಕ್ಕೆ ಕೆಎಸ್ಸಾರ್ಟಿಸಿಯಿಂದ ಪ್ರಯಾಣಿಕರಿಗೆ ಮೊದಲೇ ವಿಷಯ ತಿಳಿಸಿಯೇ ಬಸ್‌ಗೆ ಹತ್ತಿಸಲಾಗುತ್ತಿದೆ. ಆದರೆ ಬೆಂಗಳೂರಿನಿಂದ ಹೊರಡುವ ಬಸ್‌ಗಳು ಶಿರಾಡಿ ತಲುಪುವಾಗಲೇ ಮುಂಜಾನೆ 4 ಗಂಟೆ ಆಗುವ ಕಾರಣ ಅಷ್ಟೊಂದು ಸಮಸ್ಯೆ ಇಲ್ಲ ಎನ್ನುತ್ತಾರೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ.

ಬೇರೆ ಮಾರ್ಗ ಪರಿಶೀಲನೆ: ಒಂದು ವೇಳೆ ಶಿರಾಡಿ ಘಾಟಿ ಹೊರತುಪಡಿಸಿ, ಬೇರೆ ರೂಟ್‌ನಲ್ಲಿ ಸಂಚಾರಕ್ಕೆ ಯೋಗ್ಯವಿದೆಯೇ ಎಂದು ತಿಳಿಯುವ ಉದ್ದೇಶಕ್ಕೆ ಕೆಎಸ್ಸಾರ್ಟಿಸಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. ಹುಲಿಕಲ್‌ ಘಾಟಿ ಮೂಲಕ ಬೆಂಗಳೂರು ತಲುಪುವುದಾದರೆ ಹೆಚ್ಚುವರಿ ಸುಮಾರು 120 ಕಿ.ಮೀ. ಕ್ರಮಿಸಬೇಕು. ಕಾರ್ಕಳದಲ್ಲಿ ಬಲಕ್ಕೆ ತಿರುಗಿ ಕುದುರೆಮುಖ-ಕಳಸ-ಚಿಕ್ಕಮಗಳೂರು ಮೂಲಕ ಬೆಂಗಳೂರಿಗೆ ಸಂಚರಿಸಬಹುದು. ಇದರಿಂದ 45 ಕಿ.ಮೀ. ಹೆಚ್ಚಾಗುತ್ತದೆ. ಆದರೆ ಇದು ತುಂಬಾ ಕಿರಿದಾದ ರಸ್ತೆಯಾದ ಕಾರಣ ಸಂಚಾರಕ್ಕೆ ಯೋಗ್ಯವಾಗಿಲ್ಲ. ಬಿಸಿಲೆ ಘಾಟಿ ಮೂಲಕ ಸಂಚಾರಕ್ಕೂ ಚಿಂತನೆ ನಡೆಸಲಾಗಿದ್ದು, ಸುಬ್ರಹ್ಮಣ್ಯ ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾದ ಕಾರಣ ಅಲ್ಲೂ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಕೊನೆಯದಾಗಿ ಶಿರಾಡಿ ಘಾಟಿಯೊಂದೇ ಸದ್ಯಕ್ಕೆ ಉಳಿದುಕೊಂಡಿದೆ.

ಸಮಸ್ಯೆ ಬೆನ್ನಲ್ಲೇ ದರ ಹೆಚ್ಚಳ
ಈ ನಡುವೆ ಕೆಲವೇ ಖಾಸಗಿ ಬಸ್‌ಗಳಲ್ಲಿ ಪ್ರಯಾಣದ ಟಿಕೆಟ್‌ ದರವನ್ನು ಏಕಾಏಕಿ ಹೆಚ್ಚಿಸಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜು.21ರಂದು ಮಂಗಳೂರಿನಿಂದ ಬೆಂಗಳೂರಿಗೆ ಗರಿಷ್ಠ ದರ 5,000 ರೂ. ಇದೆ. ವಿಶೇಷ ಅಂದರೆ, ಆನ್‌ಲೈನ್‌ನಲ್ಲಿ ಮುಂಗಡವಾಗಿ ಖಾಸಗಿ ಬಸ್‌ ಬುಕ್ಕಿಂಗ್‌ ವೇಳೆ ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಜು.21ರಂದು ಗರಿಷ್ಠ ದರ 9,000 ರೂ. ತೋರಿಸುತ್ತಿದೆ. ರಾತ್ರಿ ವೇಳೆ ಶಿರಾಡಿ ಘಾಟಿ ಮೂಲಕ ಖಾಸಗಿ ಬಸ್‌ ಸಂಚರಿಸುವುದಿಲ್ಲ. ಇದರಿಂದಾಗಿ ಉಪ್ಪಿನಂಗಡಿಗೆ ಯಾವುದೇ ಬಸ್‌ ಬರುವುದಿಲ್ಲ. ಆದರೂ ಆ ಮಾರ್ಗ ಪ್ರಯಾಣಿಕರ ಬುಕ್ಕಿಂಗ್‌ಗೆ ಯಾಕೆ ನಮೂದು ಮಾಡಲಾಗಿದೆ? ಅಷ್ಟೊಂದು ದರ ಯಾಕೆ ಎಂದು ಪ್ರಯಾಣಿಕರಿಗೆ ತಿಳಿಯದೇ ಹೋಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next