Advertisement

Heavy Rain: ಘಟಪ್ರಭಾ ನದಿ ಹರಿವು ಹೆಚ್ಚಳ : ಮತ್ತೆ ಮೂರು ಸೇತುವೆಗಳು ಜಲಾವೃತ

10:45 PM Aug 26, 2024 | Team Udayavani |

ಮಹಾಲಿಂಗಪುರ: ಪಶ್ಚಿಮ ಘಟ್ಟಗಳ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಕಳೆದ 4-5 ದಿನಗಳಿಂದ ಘಟಪ್ರಭಾ ನದಿಯು ತುಂಬಿ ಹರಿಯುತ್ತಿದೆ.

Advertisement

ರವಿವಾರ ಸಂಜೆ ಎರಡು, ಸೋಮವಾರ ಮುಂಜಾನೆ ಒಂದು ಸೇರಿದಂತೆ ಮೂರು ಸೇತುವೆಗಳು ಜಲಾವೃತವಾಗಿದೆ. ವ್ಯಾಪಕ ಮಳೆಯಿಂದಾಗಿ ಕಳೆದ ಜು. 22 ರಿಂದ ಆ.9 ರವರೆಗೆ ಸೇತುವೆಗಳು ಜಲಾವೃತವಾಗಿದ್ದವು. ಈಗ 15 ದಿನಗಳ ಅಂತರದಲ್ಲಿ ಮತ್ತೇ ಸೇತುವೆಗಳು ಜಲಾವೃತವಾದ್ದರಿಂದ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೆ ನೆರೆಯ ಭೀತಿ ಪ್ರಾರಂಭವಾಗಿದೆ.

ನಂದಗಾಂವ, ಢವಳೇಶ್ವರ-ಮಿರ್ಜಿ ಸೇತುವೆಗಳು ಜಲಾವೃತ :
ಸಮೀಪದ ಢವಳೇಶ್ವರ-ಢವಳೇಶ್ವರ, ಮಿರ್ಜಿ-ಅಕ್ಕಿಮರಡಿ, ನಂದಗಾಂವ-ಅವರಾದಿ ಸೇತುವೆಗಳು ಜಲಾವೃತವಾಗಿವೆ. ಮೂರು ಸೇತುವೆಗಳ ಮೇಲೆ ಸುಮಾರು 2-3 ಅಡಿಗೂ ಅಧಿಕ ನೀರು ಹರಿಯುತ್ತಿರುವ ಕಾರಣ ಸೇತುವೆಗಳ ಮೇಲಿನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಹಲವು ಗ್ರಾಮಗಳ ಸಂಪರ್ಕ ಕಡಿತ :
ಢವಳೇಶ್ವರ, ಮಿರ್ಜಿ, ನಂದಗಾಂವ ಸೇರಿ ಮೂರು ಸೇತುವೆಗಳ ಜಲಾವೃತದಿಂದಾಗಿ ಮಹಾಲಿಂಗಪುರದಿಂದ ಮುಧೋಳ ತಾಲೂಕಿನ ಮಿರ್ಜಿ, ಒಂಟಗೋಡಿ, ಚನ್ನಾಳ, ಮಲ್ಲಾಪೂರ ಗ್ರಾಮಗಳು ಹಾಗೂ ಬೆಳಗಾವಿ ಜಿಲ್ಲೆಯ ಗಡಿಭಾಗದ ಮೂಡಲಗಿ ತಾಲೂಕಿನ ಢವಳೇಶ್ವರ, ಬಿಸನಕೊಪ್ಪ, ಹುಣಶ್ಯಾಳ ಪಿವೈ, ವೆಂಕಟಾಪೂರ, ಅವರಾದಿ, ಅಳ್ಳಿಮಟ್ಟಿ, ಯರಗುದ್ರಿ, ತಿಮ್ಮಾಪೂರ, ಹೊಸ ಯರಗುದ್ರಿ, ಕುಲಗೋಡ, ಕೌಲಜಗಿ ಗ್ರಾಮಗಳಿಗೆ ಹೋಗುತ್ತಿದ್ದ ಸಂಪರ್ಕ ರಸ್ತೆಗಳ ಕಡಿತವಾಗಿ ಈ ಗ್ರಾಮಗಳಿಗೆ ಹೋಗುವವರು ಗೋಕಾಕ, ಮುಧೋಳ, ಯಾದವಾಡ ಮಾರ್ಗವಾಗಿ 50-60 ಕಿಮೀ ಸುತ್ತುವರಿದು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಘಟಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು :
ದುಪದಾಳ ಜಲಾಶಯದಿಂದ 22150 ಕ್ಯೂಸೆಕ್, ಮಾರ್ಕಂಡೇಯ ಜಲಾಶಯದಿಂದ 1771 ಕ್ಯೂಸೆಕ್, ಬಳ್ಳಾರಿ ನಾಲಾದಿಂದ 1339 ಕ್ಯೂಸೆಕ್ ಸೇರಿ ಸರಿ ಸುಮಾರು 25260 ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ. ಗರಿಷ್ಠ 51 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯಯುಳ್ಳ ಹಿಡಕಲ್ ಜಲಾಶಯದಲ್ಲಿ ಸೋಮವಾರ ಮುಂಜಾನೆವರೆಗೆ ಸುಮಾರು 49 ಟಿಎಂಸಿ ನೀರಿನ ಸಂಗ್ರಹವಾಗಿದೆ. ಸದ್ಯ ಜಲಾಶಯಕ್ಕೆ 14588 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 16833 ಕ್ಯೂಸೆಕ್ ಹೊರ ಹರಿವು ಇದೆ.

Advertisement

ಮುಂಜಾಗ್ರತೆ ಅಗತ್ಯ :
ಘಟಪ್ರಭಾ ನದಿ ಪಾತ್ರದ ಗ್ರಾಮಗಳ ಜನತೆಯು ಸುರಕ್ಷಿತರಾಗಿರಬೇಕು. ಸೇತುವೆಗಳ ಮೇಲೆ ನೀರು ಕಡಿಮೆ ಇದೆ ಎಂದು ಯಾರು ದಾಟುವ ಸಾಹಸ ಮಾಡಬೇಡಿ. ಸೇತುವೆಗಳ ಮೇಲಿನ ಸಂಚಾರ ನಿಷೇಧಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮತ್ತು ತಾಪಂ, ಗ್ರಾಪಂ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಜೊತೆಗೆ ಸಾರ್ವಜನಿಕರು ಮುಂಜಾಗ್ರತೆವಹಿಸುವದು ಅಗತ್ಯ. – ಶ್ವೇತಾ ಬೀಡಿಕರ್, ಎಸಿ, ಜಮಖಂಡಿ

Advertisement

Udayavani is now on Telegram. Click here to join our channel and stay updated with the latest news.

Next