ನೆಲ್ಯಾಡಿ: ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿಯ ನೆಪದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲ್ಪಟ್ಟ ಬಳಿಕವೂ ಸಚಿವರು, ರಾಜಕಾರಣಿಗಳು, ಅಧಿಕಾರಿಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದನ್ನು ಪ್ರತಿಭಟಿಸಿ ಬುಧವಾರ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಿಷೇಧಿತ ರಸ್ತೆಯನ್ನು ಹಾದು ಬಂದ ಅಧಿಕಾರಿಗಳ ವಾಹನವನ್ನು ತಡೆ ಹಿಡಿದ ಘಟನೆ ನಡೆದಿದೆ.
ದ.ಕ ಜಿಲ್ಲಾ ಎಸ್.ಪಿ. ಖಡಕ್ ಸೂಚನೆ ಮೇರೆಗೆ ಕಟ್ಟುನಿಟ್ಟಾಗಿ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಆದರೆ ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರ ಪಾರ್ಥಿವ ಶರೀರ ಹೊತ್ತ ವಾಹನ ಹಾಗೂ ರಾಜಕಾರಣಿಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 75ಕ್ಕಿಂತಲೂ ಹೆಚ್ಚಿನ ವಾಹನಗಳು ಹಾಗೂ ವೋಲ್ವೋ ಬಸ್ ಕೂಡ ಸಂಚರಿಸಲು ಅವಕಾಶ ನೀಡಿದ ಕುರಿತು ಆಕ್ರೋಶ ವ್ಯಕ್ತವಾಗಿತ್ತು.
ಅವಕಾಶ ಎಲ್ಲರಿಗೂ ನೀಡಿ, ಇಲ್ಲವೇ ಎಲ್ಲರಿಗೂ ನಿಷೇಧಿಸಿ ಎಂಬ ನಿಲುವು ತಾಳಿ ಸ್ಥಳೀಯ ಮಲೆನಾಡು ಜನಹಿತ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಗುಂಡ್ಯ ಗೇಟು ಬಳಿ ಬುಧವಾರದಂದು ಕಾವಲು ಕಾಯುತ್ತಿದ್ದರು. ಬುಧವಾರ ಸಂಜೆ ಅಧಿಕಾರಿಗಳ ಆರು ವಾಹನಗಳು ಘಾಟಿ ರಸ್ತೆಯ ಮೂಲಕ ಆಗಮಿಸುತ್ತಿರುವುದನ್ನು ಕಂಡು ತಡೆಯೊಡ್ಡಿದರು.
ವಾಹನದಲ್ಲಿದ್ದವರು ನೆಲ್ಯಾಡಿ ಸಮೀಪ ಹೆದ್ದಾರಿ ಕಾಮಗಾರಿ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದರೂ ಸ್ಥಳೀಯರು ಪಟ್ಟು ಬಿಡಲಿಲ್ಲ. ನಮಗೆ ಕಿಲೊಮೀಟರ್ ದೂರದ ದೇವಸ್ಥಾನಕ್ಕೂ ಹೋಗಲೂ ಅವಕಾಶ ನೀಡುತ್ತಿಲ್ಲ. 30 ಕಿ.ಮೀ. ದೂರದ ನೆಲ್ಯಾಡಿಗೆ ಹೇಗೆ ಹೋಗಲು ಸಾಧ್ಯವೆಂದು ಪ್ರಶ್ನಿಸಿ ಚಾರ್ಮಾಡಿ ಅಥವಾ ಮೈಸೂರು ಮಾರ್ಗವಾಗಿಯೇ ಹೋಗಿ ಎಂದು ತಾಕೀತು ಮಾಡಿ ತಡೆ ಹಿಡಿದಿದ್ದಾರೆ.
ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಂಚರಿಸಲು ಅವಕಾಶವಿದೆ ಎಂದಾದರೆ ನಮಗೂ ಅವಕಾಶ ನೀಡಲೇಬೇಕು. ತಾರತಮ್ಯ ಸಹಿಸಲಾರೆವು. ಮುಂದೆ ಅಧಿಕಾರಿಗಳು ಯಾ ರಾಜಕಾರಣಿಗಳ ವಾಹನ
ಈ ರಸ್ತೆಯಲ್ಲಿ ಸಾಗಿದ್ದೇ ಆದರೆ ಪ್ರತಿಭಟಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಲೆನಾಡು ಜನ ಹಿತರಕ್ಷಣಾ ಸಮಿತಿಯ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.