Advertisement
ಬುಧವಾರ ರಾತ್ರಿಯಿಂದಲೇ ನೆಲ್ಯಾಡಿ, ಗುಂಡ್ಯ, ಶಿರಾಡಿ ಘಾಟಿ ಭಾಗಗಳಲ್ಲಿ ಅವಿರತವಾಗಿ ಸುರಿದ ಮಳೆಯಿಂದ ಗುರುವಾರ ಬೆಳಗ್ಗಿನ ಜಾವದ ವೇಳೆಗೆ ಗುಂಡ್ಯ ಹೊಳೆ ಉಕ್ಕಿ ಹರಿಯತೊಡ ಗಿತು. ಉದನೆ ಪೇಟೆ ಜಲಾವೃತಗೊಳ್ಳುವ ಮೂಲಕ ಶಿರಾಡಿ- ಗುಂಡ್ಯ ಭಾಗದ ಜನ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿತ್ತು. ಮಾರನಹಳ್ಳಿಯಿಂದ ನೆಲ್ಯಾಡಿ ಭಾಗದವರೆಗೂ ಅಲ್ಲಲ್ಲಿ ಗುಡ್ಡ ಕುಸಿದಿತ್ತು. ಒಂದು ಕಡೆ ಮಣ್ಣು ತೆರವುಗೊಳಿಸುವ ಕಾರ್ಯ ಮುಗಿಯುವ ಮೊದಲೇ ಇನ್ನೊಂದು ಕಡೆ ಕುಸಿದ ಸುದ್ದಿ ಬರುತ್ತಿತ್ತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಕರೆದೊಯ್ಯು ತ್ತಿದ್ದ ವಾಹನವು ಶಿರಾಡಿ ಮತ್ತು ಅಡ್ಡಹೊಳೆಯ ನಡುವೆ ಗುಡ್ಡ ಕುಸಿತದಿಂದ ಸಿಲುಕಿಕೊಂಡಿತ್ತು. ವಿದ್ಯಾರ್ಥಿಗಳು, ಹೆತ್ತವರು ಹಾಗೂ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಜೆಸಿಬಿ ಬಳಸಿ ಮಣ್ಣನ್ನು ತೆರವುಗೊಳಿಸುವ ಮೂಲಕ ವಿದ್ಯಾರ್ಥಿಗಳ ವಾಹನಕ್ಕೆ ಅವಕಾಶ ನೀಡಲಾಯಿತು.
ಗುಂಡ್ಯ ಹಾಗೂ ಸಕಲೇಶಪುರದ ನಡುವೆ ದಟ್ಟ ಕಾಡಿನ ಮಧ್ಯೆ ಹಾದುಹೋಗುವ ರೈಲ್ವೇ ಹಳಿಯ ಮೇಲೆ ಅರೆಬೆಟ್ಟ ಎಂಬಲ್ಲಿನ ಭಾರೀ ಗಾತ್ರದ ಗುಡ್ಡ ಕುಸಿದಿದೆ ಎಂದು ಶಂಕಿಸಲಾಗಿದೆ. ಇದನ್ನು ಗುಂಡ್ಯ ಹೊಳೆಯ ಇನ್ನೊಂದು ಭಾಗದಲ್ಲಿದ್ದವರು ಮೊಬೈಲ್ ಮೂಲಕ ಚಿತ್ರೀಕರಿಸಿದ್ದು, ಪ್ರವಾಹದೋಪಾದಿಯಲ್ಲಿ ನೀರು ಹಾಗೂ ಮಣ್ಣಿನೊಂದಿಗೆ ಬೃಹತ್ ಗಾತ್ರದ ಮರಗಳೂ ಉರುಳಿ ಬೀಳುತ್ತಿರುವ ದೃಶ್ಯ ವೈರಲ್ ಆಗಿತ್ತು. ಅರೆಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ದೊಡ್ಡ ತೋಡು ಹರಿಯುತ್ತಿದ್ದು, ಅಲ್ಲಿನ ನೀರಿನ ಒತ್ತಡಕ್ಕೆ ಈ ಗುಡ್ಡ ಗುಂಡ್ಯ ಹೊಳೆಯತ್ತ ಉರುಳಿದೆ. ಯೋಜನೆ ಅನಾಹುತ: ಆರೋಪ
ಎತ್ತಿನಹೊಳೆಗಾಗಿ ಅಣೆಕಟ್ಟು ಕಟ್ಟಿರುವ ಜತೆಗೆ ವಿದ್ಯುತ್ ಯೋಜನೆಗಾಗಿ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳ ನಡುವೆ ಅಣೆಕಟ್ಟು ಕಟ್ಟಿರುವುದರಿಂದ ಅಂತರ್ಜಲ ಮಟ್ಟದಲ್ಲಿ ಏರುಪೇರು ಸಂಭವಿಸಿ ಶಿರಾಡಿ ಘಾಟಿಯ ಸುತ್ತಲಿನ ಗುಡ್ಡಗಳು ಕುಸಿಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಗುಂಡ್ಯ ಶಿರಾಡಿ, ಉದನೆ, ಇಚಿಲಂಪಾಡಿ, ಕುರಿಯಾಳಕೊಪ್ಪ, ಪಡುಬೆಟ್ಟು, ಪಟ್ರಮೆ, ಶಿಶಿಲ, ಶಿಬಾಜೆ ಭಾಗಗಳಲ್ಲಿ ಹಲವು ಮನೆಗಳು ಹಾಗೂ ಕೃಷಿ ಮುಳುಗಡೆಯ ಭೀತಿ ಎದುರಿಸುತ್ತಿದೆ. ಈ ಭಾಗಗಳ ಕೆಲವು ಮನೆಗಳು ಜಲಾವೃತಗೊಂಡು ಆತಂಕದ ಸನ್ನಿವೇಶ ಎದುರಿಸುತ್ತಿದ್ದಾರೆ.
Related Articles
ಕೊಕ್ಕಡದಿಂದ ಪಟ್ಟೂರು ಮಾರ್ಗವಾಗಿ ಧರ್ಮಸ್ಥಳವನ್ನು ಸಂಪರ್ಕಿಸುವ ರಸ್ತೆ ಪಟ್ಟೂರು ಎಂಬಲ್ಲಿ ಜೌಗು ಪ್ರದೇಶವಾಗಿ ಮಾರ್ಪಟ್ಟು, ವಾಹನಗಳು ಹೂತು ಹೋಗುತ್ತಿವೆ. ಸಂಜೆಯ ವೇಳೆಗೆ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗದಷ್ಟು ಕೆಟ್ಟು ಹೋಗಿ, ಸಂಚಾರ ಸ್ಥಗಿತಗೊಂಡಿದೆ. ಪಟ್ರಮೆಯ ಮಸೀದಿ ಬಳಿ ಹಾಗೂ ಶಾಂತಿಕಾಯ ಎಂಬಲ್ಲಿ ಹೊಳೆಯ ನೀರು ರಸ್ತೆ ನುಗ್ಗಿ 3 ತಾಸು ಸಂಚಾರ ತಡೆಯುಂಟಾಗಿತ್ತು. ಹೊಳೆಯ ಬದಿಯ ಮನೆಗಳು ಕುಸಿಯುವ ಭೀತಿ ಎದುರಾಗಿದೆ.
Advertisement
ಕೊಕ್ಕಡ, ಶಿಶಿಲ ಸಂಪರ್ಕ ಕಡಿತ ಭೀತಿಕೊಕ್ಕಡದಿಂದ ಶಿಶಿಲವನ್ನು ಸಂಪರ್ಕಿಸಲು ಇರುವ ರಸ್ತೆಯ ಕಾಪಿನಬಾಗಿಲು ಹಾಗೂ ಹೊಳೆಗಂಡಿ ಎಂಬಲ್ಲಿ ಕಪಿಲಾ ನದಿ ನೀರು ಡಾಮರು ರಸ್ತೆಯ ಅಂಚಿನಲ್ಲಿ ಹರಿಯುತ್ತಿದ್ದು, ಒಂದೆಡೆ ಹೊಳೆ, ಇನ್ನೊಂದು ಭಾಗದಲ್ಲಿ ಗುಡ್ಡ ಇರುವುದರಿಂದ ಹೊಳೆಯ ಭಾಗದಲ್ಲಿ ಕುಸಿತವುಂಟಾಗಿ ಘನವಾಹನ ಸಂಚಾರ ಸ್ಥಗಿತಗೊಂಡಿದೆ.