Advertisement
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ, ಗ್ರಾ.ಪಂ. ಸದಸ್ಯ ಪ್ರಕಾಶ್ ಗುಂಡ್ಯ, ದಾಮೋದರ ಗುಂಡ್ಯ ಅವರು, ಸಂಚಾರಕ್ಕೆ ಅನುವು ನೀಡದಿರುವ ಕಾರಣ ಸ್ಥಳೀಯ ಶಾಲಾ ಮಕ್ಕಳು, ಗ್ರಾಮಸ್ಥರಿಗೆ ಅನನುಕೂಲವಾಗುತ್ತಿದೆ. ಕಾಂಕ್ರೀಟ್ ಕಾಮಗಾರಿಯಾಗಿ 15 ದಿನಗಳು ಕಳೆದಿರುವುದರಿಂದ ವಾಹನಗಳಿಗೆ ಸಂಚರಿಸಲು ಅನುವು ಮಾಡಿಕೊಡಬೇಕು. ವಿಪರೀತ ಮಳೆಯ ಕಾರಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಚಾರ್ಮಾಡಿ ಘಾಟಿ ಸಂಚಾರ ತಡೆಯುಂಟಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತವು ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸುವಂತೆ ಅವರು ಮನವಿ ಮಾಡಿಕೊಂಡರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳ ತುರ್ತು ಸಂಚಾರಕ್ಕೆ ಸಂಬಂಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್ ಭರವಸೆಯಿತ್ತರು.
ಶಾಲಾ ಮಕ್ಕಳಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಅನಾನುಕೂಲವಾಗುತ್ತಿದ್ದು, ಸಂಚಾರ ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಜು. 10ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಪೊಲೀಸರು ತಡೆಯೊಡ್ಡಿದ್ದರು. ಯಾವುದೇ ವಾಹನಗಳನ್ನು ಬಿಡದಂತೆ ಎಸ್ಪಿ ಖಡಕ್ ಆದೇಶ ನೀಡಿದ್ದಾರೆ ಎಂದು ಹೇಳುತ್ತಿದ್ದರು. ಈ ನಡುವೆ ಮಾಜಿ ಶಾಸಕರ ಕಾರನ್ನು ಬಿಟ್ಟದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಯಿತು.