Advertisement

ದೀಪಾವಳಿ ಸಂಭ್ರಮಕ್ಕೆ ಝಗಮಗಿಸಲಿ ಮನೆ 

01:06 PM Oct 27, 2018 | |

ಎಲ್ಲರೂ ಕಾತರದಿಂದ ಎದುರು ನೋಡುವ ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಕೆಲವರು ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇನ್ನು ಕೆಲವರು ಮನೆಯನ್ನು ಯಾವ ರೀತಿ ಅಲಂಕಾರ ಮಾಡಬಹುದು, ಇದರಲ್ಲಿ ವೈಶಿಷ್ಟ್ಯತೆ ಕಾಪಾಡಿಕೊಳ್ಳುವುದು ಹೇಗೆ?, ಅಲಂಕಾರಕ್ಕೆ ಏನೆಲ್ಲ ಬೇಕು ಎಂಬ ತಯಾರಿಯಲ್ಲಿದ್ದಾರೆ. ಇದಕ್ಕಾಗಿ ಕೆಲವೊಂದು ಐಡಿಯಾಗಳು ಇಲ್ಲಿವೆ. ಈ ಬಾರಿಯ ದೀಪಾವಳಿಗೆ ಇವನ್ನೂ ಟ್ರೈ ಮಾಡಿ ವಿಶೇಷವಾಗಿ ಹಬ್ಬ ಆಚರಿಸಬಹುದು. 

Advertisement

ಬೆಳಕಿನ ಹಬ್ಬ ದೀಪಾವಳಿ ಎಂದರೆ ಮನೆಯ ಶೃಂಗಾರಕ್ಕೆ ಪ್ರಥಮ ಆದ್ಯತೆ. ಬಣ್ಣ ಬಣ್ಣದ ವಿದ್ಯುತ್‌ ದೀಪಗಳು, ಚಿತ್ತಾಕರ್ಷಕಗೂಡು ದೀಪಗಳು, ರಂಗೋಲಿ, ಆಲಂಕಾರಿಕ ಸಾಧನಗಳಿಗೆ ಇಲ್ಲಿ ಪ್ರಮುಖ ಸ್ಥಾನ. ದೀಪಗಳ ಬೆಳಕಲ್ಲಿ ಮನೆಯ ಅಂದ ಹೆಚ್ಚಿಸುವ ಅಲಂಕಾರಕ್ಕೆ ಈ ಸಂದರ್ಭದಲ್ಲಿ ಹೆಚ್ಚಿನ ಆದ್ಯತೆ ಇರುವುದರಿಂದ ಮುಖ್ಯವಾಗಿ ಗೋಡೆ ಬಣ್ಣ, ಕರ್ಟನ್‌, ಸೋಫಾ, ಬೆಡ್‌ ಕವರ್‌ ಇತ್ಯಾದಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮೊದಲಿಗೆ ಹಬ್ಬದ ವಾತಾವರಣಕ್ಕೆ ಹೊಂದುವಂತೆ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ವಸ್ತುಗಳನ್ನೆಲ್ಲ ಸರಿಯಾಗಿ ಜೋಡಿಸಿಡಿ. ಅನಗತ್ಯ ವಸ್ತುಗಳನ್ನೆಲ್ಲ ತೆಗೆದಿಡಿ.

ಅಲಂಕಾರಕ್ಕೆ ಟಿಪ್ಸ್‌
ದೀಪಾವಳಿ ಸಂಭ್ರಮ  ಹೆಚ್ಚಿಸಲು ಮನೆಯ ಅಲಂಕಾರಕ್ಕೆ ಕನ್ನಡಿಗಳನ್ನು ಬಳಸಿ. ಇದು ಮನೆಯನ್ನು ವಿಶಾಲವಾಗಿ ಕಾಣುವಂತೆ ಮಾಡುವುದಲ್ಲದೆ, ಬೆಳಕಿನ ಪ್ರತಿಫ‌ಲನ ವನ್ನು ಸೃಷ್ಟಿಸಿ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಖಾಲಿ ಗೋಡೆಯ ಮೇಲೆ ಉದ್ದವಾದ ಕನ್ನಡಿಯನ್ನು ಜೋಡಿಸಿಟ್ಟರೆ ಮನೆಯ ಅಂದ ಹೆಚ್ಚಾಗುವುದು. ಸಾಧ್ಯವಿದ್ದರೆ ಹಬ್ಬಕ್ಕಿಂತ ಮೊದಲು ಮನೆಗೊಮ್ಮೆ ಬಣ್ಣ ಬಳಿಯಿರಿ.

ವಿವಿಧ ಕಲಾಕೃತಿಗಳು
ಸುಂದರ ಕಲಾಕೃತಿಗಳು ಎಲ್ಲೇ ಇದ್ದರೂ ಕಣ್ಮನ ಸೆಳೆಯುತ್ತದೆ. ಪೆಬಲ್‌ ಆರ್ಟ್‌ನಂತ ಕಲಾಕೃತಿಗಳು ಮನೆಯೊಳಗೆ ಜೋಡಿ ಸಿಟ್ಟರೆ ಹಬ್ಬದ ಸಂಭ್ರಮ ಹೆಚ್ಚಾಗುವುದು. ದೀಪಗಳ ಸಾಲನ್ನು ಮನೆಯೊಳಗೆ ಜೋಡಿಸಿಡುವಾಗ ಆ ಬೆಳಕಿನಲ್ಲಿ ಕಲಾಕೃತಿಗಳು ಹೊಳೆಯಲಾರಂಭಿಸುತ್ತದೆ. ಕೈಯಿಂದ ತಯಾರಿಸಿದಂತಹ ಫೋಟೊ ಫ್ರೇಮ್ , ಮರದ ಕಲಾಕೃತಿಗಳು, ಪೈಂಟಿಂಗ್ಸ್‌ಗಳಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.

ಸಾಂಪ್ರದಾಯಿಕ ಶೈಲಿಗೆ ಆದ್ಯತೆ ಕೊಡಿ
ಹಬ್ಬಗಳ ಆಚರಣೆಯಲ್ಲಿ ಎಲ್ಲರೂ ಸಾಂಪ್ರದಾಯಿಕ ಶೈಲಿಯನ್ನೇ ಮೆಚ್ಚುತ್ತಾರೆ. ಹೀಗಾಗಿ ಮನೆ ಆಧುನಿಕ ಶೈಲಿಯಲ್ಲಿದ್ದರೂ ವಸ್ತುಗಳು, ಆಲಂಕಾರಿಕ ಸಾಮಗ್ರಿಗಳ ಆಯ್ಕೆಯಲ್ಲಿ ಸಾಂಪ್ರದಾಯಿಕತೆಗೆ ಆದ್ಯತೆ ನೀಡಿ. ಇಲ್ಲವಾದರೆ ಆಧುನಿಕತೆ ಹಾಗೂ ಸಾಂಪ್ರದಾಯಿಕ ಶೈಲಿಯ ಸಮ್ಮಿಶ್ರಣ ಮಾಡಬಹುದು.

Advertisement

ಸಾವಿರಾರು ರೂ. ಹಣ ಖರ್ಚು ಮಾಡಿ ತರುವ ವಿದ್ಯುತ್‌ ದೀಪಗಳಿಗಿಂತ ಚಿಕ್ಕದಾಗಿ ಚೊಕ್ಕವಾಗಿರುವ ಹಣತೆಗಳೇ ಮನೆಯ ಅಂದವನ್ನು ಹೆಚ್ಚಿಸುತ್ತದೆ ಎಂಬುದು ನೆನಪಿರಲಿ. ಜತೆಗೆ ಮಿನಿಯೇಚರ್‌ , ಹ್ಯಾಂಗಿಂಗ್‌ ದೀಪ, ಸ್ಪ್ರಿಂಗ್‌ ದೀಪ, ಲೋಟಸ್‌ ಲ್ಯಾಂಪ್‌, ಓವಲ್‌ ಆಕಾರದ ಲ್ಯಾಂಪ್‌ ಗಳಿಂದಲೂ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.

ವಿವಿಧ ಮಾದರಿಯ ಕ್ಯಾಂಡಲ್‌ ಸ್ಟಾಂಡ್‌, ಗಾಜಿನ ಲೋಟಗಳಲ್ಲಿ ದೀಪಗಳನ್ನು ಉರಿಸಿಡಬಹುದು. ವಿದ್ಯುತ್‌ ದೀಪಗಳನ್ನು ಖಾಲಿ ಬಾಟಲಿಗೆ ಬಣ್ಣ ಹಚ್ಚಿ ಅದರೊಳಗೆ ಇಟ್ಟು ಉರಿಸಿ. ಇದರಿಂದ ಮನೆಯ ಅಂದ ಹೆಚ್ಚುವುದು. ಅಲ್ಲದೇ ಮಣ್ಣಿನ ಹಣತೆಗಳಿಗೆ ಬಣ್ಣ ಹಚ್ಚಿ, ದೀಪಗಳನ್ನು ಅಲಂಕರಿಸಿ. ಹೂದಾನಿಗಳು, ಹೂಕುಂಡ ಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜತೆಗೆ ತಾಜಾ ಅನುಭವವನ್ನು ಕೊಡುತ್ತದೆ. ಮಿನಿಯೇಚರ್‌ ಗಳಿಂದ ಇವುಗಳನ್ನು ಸಿಂಗರಿಸಿದರೆ ಮನೆಯ ಸೌಂದರ್ಯ ವೃದ್ಧಿಸುವುದು.

ಆಯ್ಕೆ ಹೀಗಿರಲಿ
ಹಬ್ಬದ ಸಂದರ್ಭದಲ್ಲಿ ಬಳಸುವ ಪೀಠೊಪಕರಣ, ಟೇಬಲ್‌ ಮ್ಯಾಟ್‌, ಕಾರ್ಪೆಟ್, ಕವರ್‌ ಗಳನ್ನು ಆಯ್ದುಕೊಳ್ಳುವಾಗ ಬಣ್ಣಗಳ ಬಗ್ಗೆ ಹೆಚ್ಚು ಜಾಗೃತರಾಗಿರಿ. ಮನೆಯ ಹಾಗೂ ನೆಲದ ಬಣ್ಣದೊಂದಿಗೆ ಅವುಗಳು ಹೊಂದಿಕೊಳ್ಳಬೇಕಾದುದು ಅತೀ ಅಗತ್ಯ. ನೆಲದ ಹಾಸು ಬಿಳಿ ಬಣ್ಣದಾಗಿದ್ದರೆ ಪೀಠೊಪಕರಣ, ಕರ್ಟನ್‌, ನೆಲದ ಹಾಸು ಕಪ್ಪು ಬಣ್ಣದಲ್ಲಿದ್ದರೆ ಸುಂದರವಾಗಿ ಕಾಣುತ್ತದೆ. ವಿವಿಧ ಮಾದರಿಯ ವಾಲ್‌ ಪೈಂಟಿಂಗ್‌ ಗಳನ್ನು ತಂದು ಜೋಡಿಸಬಹುದು.

ಇನ್ನು ಬಾಗಿಲು ಕಿಟಿಕಿಗಳಿಗೆ ಜೋಡಿಸುವ ಕರ್ಟನ್‌ಗಳು ಸರಳವಾಗಿರಲಿ. ತುಂಬಾ ಹೊಳೆಯುವ ಬಣ್ಣಗಳು ಅಷ್ಟು ಸೂಕ್ತವಲ್ಲ. ಯಾಕೆಂದರೆ ವಿದ್ಯುತ್‌, ದೀಪಗಳ ಬೆಳಕಿನೆದುರು ಈ ಕರ್ಟನ್‌ ಗಳು ಕಿರಿಕಿರಿ ಉಂಟು ಮಾಡಬಹುದು. ಹೀಗಾಗಿ ಬಾರ್ಡರ್‌ ಇರುವ ಒಂದೇ ಬಣ್ಣದ ಕರ್ಟನ್‌ಗಳು ಬಾಗಿಲಿನಲ್ಲಿದ್ದರೆ ಹೆಚ್ಚು ಸುಂದರ. ಹೆಚ್ಚು ತೆಳು ಅಥವಾ ದಪ್ಪವಾಗಿರುವ ಕರ್ಟನ್‌ ಗಳು ಬೇಡ. ಗೋಲ್ಡನ್‌, ಬಿಳಿ, ಪಿಂಕ್‌ ಬಣ್ಣಗಳ ಕರ್ಟನ್‌ಗೆ ಆದ್ಯತೆ ನೀಡಿ.

ಹಬ್ಬದ ವೇಳೆ ಡೈನಿಂಗ್‌ ಟೇಬಲ್‌ ಗಳು ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳುವುದರಿಂದ ಇದರ ಅಲಂಕಾರಕ್ಕೂ ಆದ್ಯತೆ ಇರಲಿ. ಟೇಬಲ್‌ ಮೇಲೆ ಆಕರ್ಷಕ ಮ್ಯಾಟ್‌ ಅಳವಡಿಸಿ. ಇದರ ಬಣ್ಣ ಟೇಬಲ್‌ಗೆ ಹೊಂದಿಕೆಯಾಗುವಂತಿರಲಿ. ಗಾಜಿನ ಟೇಬಲ್‌ ಇದರ ಅಗತ್ಯವಿಲ್ಲ. ಟೇಬಲ್‌ನಲ್ಲಿ ಕ್ಯಾಂಡಲ್‌ ಸ್ಟಾಂಡ್‌ನ‌ ಜತೆಗೆ ಹೂದಾನಿ, ಹಣ್ಣು ಗಳನ್ನು ತಟ್ಟೆಯಲ್ಲಿ ಹಾಕಿ ಜೋಡಿ ಸಿಡಿ. ರೆಡ್‌, ಪಿಂಕ್‌ ಬಣ್ಣದ ವಸ್ತುಗಳನ್ನೇ ಆಯ್ದುಕೊಳ್ಳಿ.

ಮನೆಯ ಅಲಂಕಾರಕ್ಕೆ ತಾಜಾ ಹೂಗಳನ್ನು ಬಳಸಿ. ಪ್ರವೇಶ ದ್ವಾರ ದಲ್ಲಿ ಸೇವಂತಿಗೆ, ಗೊಂಡೆ ಹೂವಿನ ಮಾಲೆ ಹಾಕಿ. ಇದು 2- 3 ದಿನ ಬಾಳಿಕೆ ಬರುವುದು ಮಾತ್ರವಲ್ಲ ಮನೆಯಲ್ಲಿ ಹಬ್ಬದ ವಾತಾವರಣನ್ನು ಸೃಷ್ಟಿಸುತ್ತದೆ. ಲವಂಗದ ಎಲೆ, ಗಂಧ ಚಂ‌ದನಗಳನ್ನು ಮನೆಯಲ್ಲಿ ಉರಿಸಿಡುವುದರಿಂದ ಮನೆಯ ವಾಯು ಶುದ್ಧವಾಗುತ್ತದೆ. ಜತೆಗೆ ಮನೆಯೊಳಗೆ ಪರಿಮಳ ಆವರಿಸಿ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ.

ಹಬ್ಬ ಆಚರಣೆ ವೇಳೆ ಜಾಗೃತರಾಗಿರಿ
ದೀಪಾವಳಿ ಹಬ್ಬವೆಂದರೆ ಕ್ಯಾಂಡಲ್‌, ದೀಪ, ಎಣ್ಣೆ, ಪಟಾಕಿಗಳ ಬಳಕೆ ಹೆಚ್ಚಾಗಿರುತ್ತದೆ. ಇದರಿಂದ ಮನೆ, ಮನೆಯೊಳಗಿನ ವಸ್ತುಗಳಿಗೆ ಹಾನಿಯಾಗುವ ಸಾಧ್ಯತೆಯೂ ಅಧಿಕ. ಹೀಗಾಗಿ ಈ ಬಗ್ಗೆ ಎಚ್ಚರದಿಂದಿರುವುದು ಅತೀ ಅಗತ್ಯ. ನೆಲವನ್ನು ಸಂಪೂರ್ಣವಾಗಿ ಕಾರ್ಪೆಟ್ ಗಳಿಂದ ಮುಚ್ಚುವುದರಿಂದ ಮನೆಯ ಅಂದ ಹೆಚ್ಚಾಗುವುದಲ್ಲದೆ ಹಬ್ಬದ ಆಚರಣೆ ವೇಳೆ ನೆಲಕ್ಕೆ ಉಂಟಾಗುವ ಹಾನಿಯನ್ನೂ ತಪ್ಪಿಸಬಹುದು. ದೀಪಗಳನ್ನು ಉರಿಸಿಡುವ ಜಾಗದಲ್ಲಿ ನೆಲಕ್ಕೆ ತೆಳು ವಾದ ಪ್ಲಾಸ್ಟಿಕ್‌ ಪೇಪರ್‌ ಗಳನ್ನು ಅಥವಾ ಪಿಂಗಾಣಿಯಂಥ ಪಾತ್ರೆಗಳನ್ನು ಇಡಬಹುದು. ದೀಪಗಳಿಗೆ ಹತ್ತಿರವಾಗಿ ಕೂಡಲೇ ಹೊತ್ತಿ ಉರಿಯುವಂಥ ಸಾಧನಗಳನ್ನು ಇಡಬೇಡಿ. 

ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next