ಮುಂಬೈ: ಕಳೆದ ಭಾನುವಾರ ಮಹಿಳೆಯೊಬ್ಬರನ್ನು ಬಲಿತೆಗೆದುಕೊಂಡ ಮುಂಬೈ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಘಟನೆಯಲ್ಲಿ ಪುತ್ರನನ್ನು ಬಂಧಿಸಿದ ಒಂದು ದಿನದ ನಂತರ ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜೇಶ್ ಶಾ ಅವರನ್ನು ಪಕ್ಷದ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಮುಖ್ಯಮಂತ್ರಿ ಶಿಂಧೆ, ಈ ಪ್ರಕರಣದಲ್ಲಿ ಸರಕಾರ ಸಂತ್ರಸ್ತ ಕುಟುಂಬದ ಜೊತೆಗಿದೆ, ಅಪರಾಧಿಗಳಿಗೆ ನಮ್ಮ ಸರಕಾರ ಬೆಂಬಲ ನೀಡಲ್ಲ ಅಲ್ಲದೆ ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಯಾವುದೇ ಆರ್ಥಿಕ ಸಹಾಯವನ್ನು ನೀಡಲು ಸರಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಜುಲೈ 7ರ ಭಾನುವಾರ ವರ್ಲಿಯ ಡಾ. ಅನ್ನಿ ಬೆಸೆಂಟ್ ರಸ್ತೆಯಲ್ಲಿ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದರು ಅಲ್ಲದೆ ಅಪಘಾತ ನಡೆದ ಸ್ಥಳದಲ್ಲಿ ಮಿಹಿರ್ ಕಾರು ನಿಲ್ಲಿಸದೆ ಹತ್ತು ಕಿಲೋಮೀಟರ್ ದೂರ ಚಲಾಯಿಸಿ ಬಳಿಕ ಕಾರು ಚಾಲಕನಿಗೆ ನೀಡಿ ನಾಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ರಾಜೇಶ್ ಶಾ ಹಾಗೂ ಕಾರು ಚಾಲಕನನ್ನು ಬಂಧಿಸಿದ್ದರು.
ಇದಾದ ಬಳಿಕ ಆರೋಪಿ ಮಿಹಿರ್ ಶಾ ನ ಬಂಧನಕ್ಕೆ ಮುಂಬೈ ಪೊಲೀಸರು ಬಲೆ ಬಿಸಿದ್ದರು. ಆದರೆ ಆತನ ಪತ್ತೆಯಾಗಲಿಲ್ಲ ಇದಾದ ಬಳಿಕ ಮಂಗಳವಾರ (ಜುಲೈ 9) ರಂದು ಮುಂಬೈ ಪೊಲೀಸರು ಮಿಹಿರ್ ನನ್ನು ಬಂಧಿಸಿದ್ದರು. ಇದಾದ ಒಂದು ದಿನದ ಬಳಿಕ ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉಪನಾಯಕ ಸ್ಥಾನದಿಂದ ರಾಜೇಶ್ ಶಾ ಅವರನ್ನು ವಜಾಗೊಳಿಸಿದ್ದಾರೆ.
ಜುಲೈ 16 ರವರೆಗೆ ಮಿಹಿರ್ ಶಾಗೆ ಪೊಲೀಸ್ ಕಸ್ಟಡಿ
ಮಂಗಳವಾರ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿ ಮಿಹಿರ್ ಶಾ ನಿಗೆ ಜುಲೈ 16 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಮಿಹಿರ್ ನನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: Dandeli ತಡೆಬೇಲಿ ದಾಟಿ ನದಿಗಿಳಿಯುತ್ತಿರುವ ಜನತೆ: ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ