Advertisement

ಶಿವಮೊಗ್ಗ: ವಸತಿ ಶಾಲೆ ಮಕ್ಕಳಿಂದ ಪ್ರತಿಭಟನೆ; ಶಾಸಕರು, ಡಿಸಿ ಸ್ಥಳಕ್ಕೆ ಬರುವಂತೆ ಪಟ್ಟು

10:03 AM Nov 23, 2021 | Shwetha M |

ಶಿವಮೊಗ್ಗ: ಪ್ರಾಂಶುಪಾಲರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಸತಿ ಶಾಲೆಯ ಮಕ್ಕಳು ಬೆಳ್ಳಂಬೆಳಗ್ಗೆ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ಸಾಗರ ತಾಲೂಕು ಆನಂದಪುರದ ಯಡೇಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಿನ ಉಪಹಾರ ತ್ಯಜಿಸಿ, ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದು, ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನ್ಯಾಯ ಕೊಡಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು?

ಊಟದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಳಗ್ಗೆ ತಿಂಡಿಯಲ್ಲಿ ಉಪ್ಪು ಕಡಿಮೆಯಾಗಿದೆ ಎಂದರೆ ರಾತ್ರಿ ಊಟಕ್ಕೆ ರಾಶಿ ಉಪ್ಪು ಸುರಿಯುತ್ತಾರೆ. ಊಟದಲ್ಲಿ ಹುಳಗಳು ಹಾಗೆ ಇರುತ್ತವೆ. ಬಡಿಸುವ ಅಣ್ಣಂದಿರು ನಮ್ಮ ಮುಖ ನೋಡಿ ಬೇಸರದಲ್ಲಿ ಬಡಿಸುತ್ತಾರೆ. ತರಗತಿಯಲ್ಲಿ ಮಾತನಾಡುವ ವಿಚಾರಗಳನ್ನು ತಿಳಿದುಕೊಂಡು ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಹೊಡೆಯುತ್ತಾರೆ. ಜಿಲ್ಲಾಧಿಕಾರಿ, ಶಾಸಕರು ಎಲ್ಲರೂ ಇಲ್ಲಿಗೆ ಬರಬೇಕು. ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕರಾವಳಿಯಲ್ಲಿ ಎಚ್ಚರಿಕೆ ಅಗತ್ಯ; ಕೇರಳದಲ್ಲಿ ಹಬ್ಬುತ್ತಿದೆ ನ್ಯೂರೊ ವೈರಾಣು ಸೋಂಕು

Advertisement

ಕುಡಿದು ಬಂದು ಹೊಡೆದರು

‘ರಾತ್ರಿ 10.30ಕ್ಕೆ ಮಲಗುವಂತೆ ತಿಳಿಸಿದ್ದರು. ಪ್ರಾಂಶುಪಾಲರು ಮತ್ತು ಎಫ್ ಡಿಎ ಸರ್ ಕುಡಿದು ಬಂದು ನನಗೆ ಒದ್ದರು. ನನ್ನ ಕೈ ಊದಿಕೊಂಡಿದೆ. ಕಾಲಿಂದ ಒದಿದ್ದಾರೆ’ ಎಂದು ವಿದ್ಯಾರ್ಥಿಯೊಬ್ಬ ಆರೋಪಿಸುತ್ತಾನೆ.

ನಮಗೆ ಪ್ರಾಂಶುಪಾಲರು ಬೇಡ

ಬೆಳಗ್ಗೆಯಿಂದ ಪ್ರತಿಭಟನೆ ಆರಂಭಿಸಿರುವ ವಿದ್ಯಾರ್ಥಿಗಳು, ನಮಗೆ ಈ ಪ್ರಾಂಶುಪಾಲರು ಬೇಡ, ನ್ಯಾಯ ಕೊಡಿಸಿ ಎಂದು ಭಿತ್ತಿಪತ್ರ ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ತಮ್ಮ ಮೇಲಿನ ಹಲ್ಲೆ ಕುರಿತು ಅಳಲು ತೋಡಿಕೊಳ್ಳುತ್ತಿದ್ದಾರೆ.

ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ

ಇನ್ನು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು, ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ.  ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಳೆದ ತಿಂಗಳು ಒಬ್ಬ ಸೆಕ್ಯೂರಿಟಿ ಬಂದಿದ್ದ. ಬಾಯ್ಸ್ ಹಾಸ್ಟೆಲ್ ನಲ್ಲಿ ಮಲಗುತ್ತಿದ್ದ. ಆತ ಮಕ್ಕಳಿಗೆ ಮೊಬೈಲ್ ಫೋನ್ ಕೊಡುತ್ತಿದ್ದ. ಇದನ್ನು ತಡೆದು, ಮಕ್ಕಳು ಓದಿಗೆ ಗಮನ ಕೊಡುವಂತೆ ಮಾಡಿದ್ದೆ. ಆತನನ್ನು ಕೆಲಸದಿಂದ ತೆಗೆದು ಹಾಕಿದೆವು. ಇದಕ್ಕೆ ನಮ್ಮ ಕೆಲವು ಶಿಕ್ಷಕರು ಕೆಲವರು ಕುಮ್ಮಕ್ಕು ಕೊಟ್ಟು ಈ ರೀತಿ ಮಾಡುತ್ತಿದ್ದಾರೆ. ಶೈಕ್ಷಣಿಕ ಕರ್ತವ್ಯ ಮಾಡಿ ಎಂದಿದ್ದಕ್ಕೆ ಮಕ್ಕಳನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ  ಎಂದು ಪ್ರಾಂಶುಪಾಲರು ಆರೋಪಿಸಿದ್ದಾರೆ.

ಶಾಸಕ ಹರತಾಳು ಹಾಲಪ್ಪ ಅವರು ಮಕ್ಕಳ ಹೋರಾಟದ ಕುರಿತು ಮಾಹಿತಿ ಪಡೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next