ಶಿವಮೊಗ್ಗ: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದೇ ತಮ್ಮ ಜೀವನದ ಬಹುದೊಡ್ಡ ಆಸೆ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಹಿಂದೆ ಸೂಕ್ತ ಸಾರಿಗೆ ಸೌಕರ್ಯ ಇರಲಿಲ್ಲ. ಪ್ರಸ್ತುತ ಬಸ್, ರೈಲು ಸೌಕರ್ಯ ಇದ್ದರೂ ಅದನ್ನು ಬಳಸಿಕೊಳ್ಳುವವರೂ ಇಲ್ಲ. ಹೀಗಾಗಿ ಶಿವಮೊಗ್ಗದಿಂದ ತಿರುಪತಿಗೆ ಆರಂಭಸಿದ್ದ ಕೆಎಸ್‌ಆರ್‌ಟಿಸಿ ಪ್ಯಾಕೇಟ್ ಟೂರ್ ಸೌಲಭ್ಯವು ಸದ್ದಿಲ್ಲದೇ ಸ್ಥಗಿತಗೊಂಡಿದೆ.
ಶಿವಮೊಗ್ಗದಿಂದ ಪ್ರತಿದಿನ ಸಾವಿರಾರು ಮಂದಿ ತಿರುಪತಿ ವೆಂಕಟೇಶ್ವರ ದರ್ಶನಕ್ಕೆ ಹೋಗುತ್ತಾರೆ. ಅದರಲ್ಲಿ ಬಹುತೇಕರು ರೈಲಿನ ಮೂಲಕ ಹೋಗುತ್ತಾರೆ. ಶೂನ್ಯ ಮಾಸ ಹೊರತುಪಡಿಸಿ ವಿಶೇಷ ದಿನಗಳಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ.
ಅತಿ ಕಡಿಮೆ ದರಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟರೂ ಜನರು ಬಳಸಿಕೊಳ್ಳುತ್ತಿಲ್ಲ. 2 ವರ್ಷದ ಹಿಂದೆ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಶಿವಮೊಗ್ಗ – ತಿರುಪತಿ – ಕಾಳಹಸ್ತಿ – ಪದ್ಮಾವತಿ ದೇವಿ ದೇವಸ್ಥಾನ – ಮೂರು ಹೊತ್ತು ಊಟ – ಹೊಟೇಲ್ – ವಿಶೇಷ ದರ್ಶನ ವ್ಯವಸ್ಥೆ ಇರುವ ಪ್ಯಾಕೇಜ್ ಟೂರನ್ನು ಲಾಂಚ್ ಮಾಡಲಾಗಿತ್ತು. ಜನರ ಪ್ರತಿಕ್ರಿಯೆ ಉತ್ತಮವಾಗಿರದ ಕಾರಣ ಸ್ಥಗಿತಗೊಳಿಸಲಾಗಿದೆ.
3900 ರೂ.ಗೆ ಮಕ್ಕಳಿಗೆ 3700 ರೂ. ದರ ಇತ್ತು. ದರದ ಕಾರಣಕ್ಕೆ ಯೋಜನೆ ಸ್ಥಗಿತಗೊಂಡಿದೆ ಎನ್ನುತ್ತಾರೆ ಸಾರ್ವಜನಿಕರು. ಬೆಂಗಳೂರಿನಿಂದಲೂ ತಿರುಪತಿ ಪ್ಯಾಕೇಜ್ ಟೂರ್ ವ್ಯವಸ್ಥೆ ಇದ್ದು 2100 ರೂ.ಗೆ ಲಭ್ಯವಿದೆ. ಶಿವಮೊಗ್ಗದಿಂದ ತಿರುಮಲ ಹೋಗುವವರು ಬೆಂಗಳೂರಿನವರೆಗೂ ರೈಲು. ಅಲ್ಲಿಂದ ಬಸ್‌ನಲ್ಲಿ ಹೋಗುವವರೂ ಇದ್ದಾರೆ. ಹಲವು ಕಾರಣಗಳಿಂದಲೂ ಯೋಜನೆ ಯಶಸ್ವಿಯಾಗಿಲ್ಲ. ಪ್ಯಾಕೇಜ್ ಟೂರ್ ಹೊರತಾಗಿಯೂ ಪ್ರತಿ ದಿನ ಬೆಳಗ್ಗೆ ವೋಲ್ವೋ ಹಾಗೂ ಕೆಂಪು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ವೋಲ್ವೋಗೆ 1097 ರೂ. ಇದ್ದರೆ, ಕೆಂಪು ಬಸ್‌ಗೆ 515 ರೂ. ಇದೆ. ಈ ಬಸ್ ಗಳು ಕೂಡ ಪೂರ್ಣ ಭರ್ತಿಯಾಗುತ್ತಿಲ್ಲ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.
ರೈಲಿಗೂ ಕಂಟಕ: ಶಿವಮೊಗ್ಗದಿಂದ ತಿರುಪತಿ (ರೇಣಿಗುಂಟ)ವರೆಗೂ ರೈಲು ವ್ಯವಸ್ಥೆಯನ್ನೂ ಆರಂಭಿಸಲಾಗಿದ್ದು ಅದಕ್ಕೂ ಕೂಡ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಶಿವಮೊಗ್ಗದಿಂದ ತಿರುಪತಿಗೆ ಶೇ.47ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದರೆ, ಅಲ್ಲಿಂದ ವಾಪಸ್ ಬರುವಾಗ ಶೇ.15ರಷ್ಟು ಜನ ಮಾತ್ರ ಭರ್ತಿಯಾಗುತ್ತಿದೆ. ಇದರಲ್ಲಿ ಶಿವಮೊಗ್ಗದಿಂದ ಬುಕ್ ಮಾಡುವವರ ಪ್ರಮಾಣ ತೀರಾ ಕಡಿಮೆ ಇದೆ. ಇದು ತತ್ಕಾಲ್ ರೈಲಾಗಿರುವುದರಿಂದ ಇದೇ ರೀತಿ ಮುಂದುವರಿದರೆ ರೈಲು ರದ್ದಾಗುವ ಸಾಧ್ಯತೆ ಇದೆ. ಈಚೆಗೆ ಸಂಸದ ಬಿ.ವೈ.ರಾಘವೇಂದ್ರ ಕೂಡ ಜನರು ರೈಲು ಸದ್ಬಳಕೆ ಮಾಡಿಕೊಳ್ಳಲು ಮನವಿ ಮಾಡಿದ್ದರು.ಸುತ್ತಮುತ್ತಲ ಜಿಲ್ಲೆಗಳ ಜನರಲ್ಲಿ ಮಾಹಿತಿ ತಿಳಿಸಲು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕರಪತ್ರ ಹಂಚಲು ಸೂಚಿಸಿದ್ದರು. ರೈಲು ಹಾಗೂ ಬಸ್‌ಗಳನ್ನು ಉಳಿಸಿಕೊಳ್ಳಲು ಜನರ ಸಹಕಾರ ಅಗತ್ಯವಿದೆ.
ತಿರುಪತಿಗೆ ಹೊಸದಾಗಿ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳೀಯರು ಹಾಗೂ ಅಕ್ಕಪಕ್ಕದ ಜಿಲ್ಲೆಯವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನೂ ಕೆಎಸ್‌ಆರ್‌ಟಿಸಿ ವತಿಯಿಂದ ಮತ್ತೆ ಆರಂಭಿಸಬೇಕಿದೆ. ಇದಕ್ಕೂ ಕೂಡ ಜನರ ಸಹಕಾರ ಬೇಕು.
ಪ್ರವೀಣ್, ಸ್ಥಳೀಯರು
ಶರತ್ ಭದ್ರಾವತಿ